ADVERTISEMENT

ಕೊಡಗಿನಲ್ಲಿ ಸುಗ್ಗಿ ಹಬ್ಬ ಹುತ್ತರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:22 IST
Last Updated 7 ಡಿಸೆಂಬರ್ 2022, 16:22 IST
   

ಮಡಿಕೇರಿ: ಸುಗ್ಗಿ ಹಬ್ಬ ‘ಹುತ್ತರಿ’ಯ ಸಂಭ್ರಮ ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗರಿಗೆದರಿತು. ನೆರೆಕಟ್ಟುವುದು, ಕದಿರು ತೆಗೆಯುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಇಲ್ಲಿನ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮುನ್ನುಡಿ ಬರೆಯುತ್ತಿದ್ದಂತೆ, ಜಿಲ್ಲೆಯ ಎಲ್ಲೆಡೆ ಸಂಭ್ರಮ ಮೇಳೈಸಿತು. ಇನ್ನೂ ಹಲವು ದಿನಗಳ ಕಾಲ ಹುತ್ತರಿಯ ಸಡಗರ ಜಿಲ್ಲೆಯಲ್ಲಿ ಮನೆ ಮಾಡಲಿದೆ.

ಚುಮುಚುಮು ಚಳಿಯ ನಡುವೆ, ಆವರಿಸಿದ್ದ ಇಬ್ಬನಿಯ ಮಧ್ಯೆ ‘ಪೊಲಿ ಪೊಲಿಯೇ ದೇವ’ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದವು. ಅಬ್ಬರದ ಪಟಾಕಿ, ಬಾನಬಿರುಸುಗಳ ಸಿಡಿತಗಳೊಂದಿಗೆ ಕೋವಿಯಿಂದ ಹೊಮ್ಮಿದ ಕುಶಾಲತೋಪುಗಳು ಸಂಭ್ರಮಕ್ಕೆ ಕಳಸವನ್ನಿಟ್ಟವು. ಐನ್‌ಮನೆಗಳು, ದೇವಾಲಯಗಳು, ವಿವಿಧ ಸಮಾಜಗಳ ಸಭಾಂಗಣಗಳಲ್ಲಿ ಸಾಮೂಹಿಕ ಆಚರಣೆಗಳ ಜತೆಗೆ ಕೊಡಗಿನಲ್ಲಿ ವಾಸಿಸುವ ಎಲ್ಲ ರೈತಾಪಿ ವರ್ಗದವರೂ ತಮ್ಮ ತಮ್ಮ ಮನೆಗಳಲ್ಲಿ ಹುತ್ತರಿಯನ್ನು ಸಡಗರದಿಂದ ಆಚರಿಸಿದರು.

ಸಾಂಪ್ರದಾಯಿಕ ದಿರಿಸಿನಲ್ಲಿ ಮಹಿಳೆಯರು ಹಾಗೂ ಪುರುಷರು ಗದ್ದೆಯಿಂದ ಭತ್ತದ ತೆನೆಯನ್ನು ಮೆರವಣಿಗೆ ಮೂಲಕ ತಂದು ಪೂಜೆ ಸಲ್ಲಿಸಿ, ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡರು. ನಂತರ ವಿವಿಧ ಬಗೆಯ ಜಾನಪದ ನೃತ್ಯಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.

ADVERTISEMENT

ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕಣಿಯಂಡ, ಕೋಳೆಯಂಡ, ಕಲಿಯಂಡ, ಐರೀರ, ಐಕೊಳಂಡ, ಬೊಳ್ಳಿನಮ್ಮಂಡ ಸೇರಿದಂತೆ ಅಮ್ಮಂಗೇರಿಯ ಹತ್ತು ಕುಟುಂಬದವರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕುಟುಂಬಗಳ ಮಹಿಳೆಯರು ‘ತಳಿಯಕ್ಕಿಬೊಳಕ್’ ಹಿಡಿದು ದೇವಾಲಯಕ್ಕೆ ಆಗಮಿಸಿದರು. ದುಡಿಕೊಟ್ ಪಾಟ್, ವಿಶೇಷ ಪ್ರಾರ್ಥನೆ, ಸಾಂಪ್ರದಾಯಿಕ ನೆರೆಕಟ್ಟುವ ಕಾರ್ಯದ ಬಳಿಕ 8.20ಕ್ಕೆ ಕುಶಾಲುತೋಪು ಹಾರಿಸಿ ‘ಪೊಲಿಪೊಲಿ ಬಾ’ ಘೋಷಣೆಗಳ ನಡುವೆ ಕದಿರನ್ನು ಕಟಾವು ಮಾಡಲಾಯಿತು.

ಮಡಿಕೇರಿಯ ಓಂಕಾರೇಶ್ವರ ದೇಗುಲ, ಪಾಲೂರು ಮಹಾಲಿಂಗೇಶ್ವರ ದೇವಾಲಯ, ಮಕ್ಕಿಶಾಸ್ತಾವು ದೇವಾಲಯ, ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯ, ನಾಪೋಕ್ಲು, ಕುಶಾಲನಗರ ಕೊಡವ, ಗೌಡ ಸಮಾಜಗಳಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.