ADVERTISEMENT

ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ: ಕೊಡಗಿನ 600 ಮಕ್ಕಳು ಭಾಗಿ

ಮೂಡಬಿದಿರೆಯಲ್ಲಿ ಡಿ. 21ರಿಂದ 27ರವರೆಗೆ ನಡೆಯಲಿದೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 9:55 IST
Last Updated 27 ನವೆಂಬರ್ 2022, 9:55 IST
ಪಿ.ಜಿ.ಆರ್. ಸಿಂಧ್ಯಾ
ಪಿ.ಜಿ.ಆರ್. ಸಿಂಧ್ಯಾ   

ಮಡಿಕೇರಿ: ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಡಿ.21ರಿಂದ 27ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆಯಲಿದ್ದು, ಕೊಡಗಿನ 600 ಮಕ್ಕಳು ಭಾಗಿಯಾಗಲಿದ್ದಾರೆ’ ಎಂದು ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಾರವಿಡೀ ನಡೆಯುವ ಸಮ್ಮೇಳನದಲ್ಲಿ ಪಾಲ್ಗೊಳ್ಳಳು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಉತ್ಸವವು ನಿತ್ಯ ಬೆಳಿಗ್ಗೆ ಯೋಗ–ಧ್ಯಾನದಿಂದ ಆರಂಭವಾಗಲಿದ್ದು, ಕರಾವಳಿ ಚಾರಣ, ಅರಣ್ಯ ಚಾರಣ, ಸಾಂಪ್ರದಾಯಿಕ ಕ್ರೀಡೆಗಳು, ಒಂದೇ ಭಾರತ– ಶ್ರೇಷ್ಠ ಭಾರತ ಕಾರ್ಯಕ್ರಮ ಸೇರಿ ಸಂಸ್ಕೃತಿ ವಿನಿಮಯ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊಡಗಿನ ಬುಡಕಟ್ಟು ಸಮುದಾಯದ 100 ಮಕ್ಕಳು ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಲಿದ್ದಾರೆ. 4 ದಿನಗಳಿಂದ ಮಡಿಕೇರಿಯಲ್ಲಿ ನಡೆದ ಮೂಲ ತರಬೇತಿ ಶಿಬಿರದಲ್ಲಿ 40ಕ್ಕೂ ಅಧಿಕ ಶಿಕ್ಷಕರು ಭಾಗಿಯಾಗಿದ್ದರು ಎಂದರು.

ADVERTISEMENT

‘ಹೊರರಾಜ್ಯದ 8 ಸಾವಿರ, ಮಲೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಥಾಯ್ಲೆಂಡ್, ದಕ್ಷಿಣ ಕೊರಿಯಾ ಸೇರಿ ಹೊರದೇಶಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ’ ಎಂದರು.

ಕೃಷಿ ಮೇಳ, ಪುಸ್ತಕ ಮೇಳ, ವಿಜ್ಞಾನ ಮೇಳ, ಕಲಾ ಮೇಳಗಳು ಜಾಂಬೂರಿಯಲ್ಲಿರಲಿವೆ. 10 ಸಾವಿರ ಶಿಕ್ಷಕರು, 3 ಸಾವಿರ ಕಲಾವಿದರು ಭಾಗವಹಿಸುತ್ತಿದ್ದಾರೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಯುಕ್ತ ತರಬೇತಿ ಇಲ್ಲಿ ದೊರಕಲಿದೆ ಎಂದರು.

4 ವರ್ಷಕ್ಕೊಮ್ಮೆ ಜಾಂಬೂರಿ ನಡೆಯುತ್ತದೆ. ಈ ಬಾರಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿರುವುದು ವಿಶೇಷ. ಮುಖ್ಯಮಂತ್ರಿ, ರಾಜ್ಯಪಾಲರು ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ರೈಲ್ವೆ ಇಲಾಖೆಯ ನೇಮಕಾತಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ನಲ್ಲೂ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಇದೆ ಎಂದರು.

ಚಾಲಕ, ನಿರ್ವಾಹಕ, ಪೊಲೀಸ್, ಅಗ್ನಿಶಾಮಕ, ಶಿಕ್ಷಕರ ನೇಮಕಾಯಲ್ಲಿಯೂ ಆದ್ಯತೆ ಕೊಡಬೇಕು ಎಂಬ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ, ಪದಾಧಿಕಾರಿಗಳಾದ ಮುತ್ತಪ್ಪ, ಮೈತ್ರಿ, ಪುಷ್ಪವೇಣಿ, ವಾಸಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.