ADVERTISEMENT

ಕೀಳುಮಟ್ಟದ ಪದ ಬಳಸಿ ನಿಂದಿಸುವುದು ಸರಿಯಲ್ಲ: ರಾಜಶೇಖರ್

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಜಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 3:15 IST
Last Updated 11 ಜೂನ್ 2025, 3:15 IST
ರಾಜಶೇಖರ್
ರಾಜಶೇಖರ್   

ಮಡಿಕೇರಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರನ್ನು ವಿಧಾನ ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಜಶೇಖರ್ ಒತ್ತಾಯಿಸಿದರು.

‘ಇವರು ಬಡವರು, ದಲಿತರು, ಆದಿವಾಸಿಗಳ ಬಗ್ಗೆ ಚಿಂತಿಸದೇ ಸಮಸ್ಯೆಗಳನ್ನು ಪರಿಹರಿಸದೇ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹಾಗೂ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಅವಾಚ್ಯವಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

‘ನಾವು ವಿರೋಧ ಮಾಡುವುದೇ ಸರಿಯಲ್ಲ, ತಪ್ಪು ಎಂದು ಹೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದ ಮೇಲೆ ಪರಸ್ಪರ ಭಿನ್ನಾಭಿಪ್ರಾಯಗಳಿರುವುದು ಸಹಜ. ವಿರೋಧವೂ ಇರುತ್ತದೆ. ಹಾಗೆಂದು, ನಾವು ಯಾರ ಬಗ್ಗೆಯಾದರೂ ಸರಿ ಅಸಂವಿಧಾನಾತ್ಮಕ ಪದಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಎಂದೂ ಸಹ ಈ ಬಗೆಯಲ್ಲಿ ಕೀಳುಮಟ್ಟದ ಶಬ್ದ ಪ್ರಯೋಗಿಸಿರಲಿಲ್ಲ. ಅಭಿವೃದ್ಧಿ ಕುರಿತು ಮಾತನಾಡಿ ಜನರ ಮನಸ್ಸನ್ನು ಗೆಲ್ಲುತ್ತಿದ್ದರು. ಇನ್ನಾದರೂ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರು ತಾವು ಬಳಸುವ ಪದಗಳ ಮೇಲೆ ಅಂಕುಶ ಹಾಕಿಕೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಎಂ.ಎನ್.ರಾಜಪ್ಪ ಮಾತನಾಡಿ, ‘ಇದೇ ವಿಷಯ ಕುರಿತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಈ ಇಬ್ಬರು ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಇವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಇವರು ಇದೇ ಬಗೆಯಲ್ಲಿ ತೀರಾ ತುಚ್ಛವಾಗಿ ನಿಂದಿಸುವುದು ಮುಂದುವರಿದರೆ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಸೋಮವಾರಪೇಟೆ ತಾಲ್ಲೂಕು ಘಟಕದ ಸಂಘಟನಾ ಸಂಚಾಲಕರಾದ ದಯಾಕರ, ಚಂದ್ರಶೇಖರ, ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್.ಆರ್.ದೇವರಾಜು, ಎಸ್.ಜೆ.ರಾಜಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.