ಮೈಸೂರಿನ ಸಂಸದರ ಕಚೇರಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪ್ರಜಾವಾಣಿ ಚಿತ್ರ.
ಮಡಿಕೇರಿ: ‘ನಮ್ಮ ಆಸ್ತಿ ರಕ್ಷಿಸುವುದು ನಮ್ಮ ಹಕ್ಕು. ಅದನ್ನು ನಮ್ಮ ತಾಯಿ ಮಾಡುತ್ತಿದ್ದಾರೆ. ಅದರಿಂದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಚಾಮರಾಜನಗರದ ಸಿದ್ದಯ್ಯನಪುರದ ರೈತರು ಅರಮನೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿರುವ ಕುರಿತು ಇಲ್ಲಿ ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು, ‘ಯಾವತ್ತೂ ಅಂತಹ ಪರಿಸ್ಥಿತಿ ಬರುವುದಿಲ್ಲ’ ಎಂದು ಹೇಳಿದರು.
ಇದರಲ್ಲಿ ಯಾರೂ ರಾಜಕೀಯ ಮಾಡುವಂತಹದ್ದು ಏನೂ ಇಲ್ಲ. ಸಂವಿಧಾನ ರಚನೆ ಸಂದರ್ಭದಲ್ಲಿ ನಮ್ಮ ರಾಜಮನೆತನ ಮಾತ್ರವಲ್ಲ 560 ರಾಜಮನೆತನಗಳ ಆಸ್ತಿ ಪಟ್ಟಿ ಇತ್ತು. ಆ ಪಟ್ಟಿ ಪ್ರಕಾರ ನಮ್ಮ ಆಸ್ತಿ ರಕ್ಷಿಸುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಈ ಸಮಸ್ಯೆಗೆ ಸರ್ಕಾರದ ತಪ್ಪೇ ಕಾರಣ. ಕಂದಾಯ ಭೂಮಿ ಬಗ್ಗೆ ಸರ್ಕಾರ ಸರಿಯಾಗಿ ಸರ್ವೇ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಇದು ಅರಮನೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ತೊಂದರೆಗೆ ಒಳಗಾಗುವರು ಅರಮನೆಗೆ ಬಂದು ಮಾತನಾಡಿ ಎಂದು ಹೇಳಿದರು.
ಜಾತಿ ಜನಗಣತಿ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಈ ವರದಿ 10 ವರ್ಷದ ಹಿಂದೆ ನಡೆದಿದೆ. ಅದನ್ನು ಇಂದಿನ ಜನಸಂಖ್ಯೆಗೆ ಅಂದಾಜು ಮಾಡಿ ಜಾರಿಗೆ ತರುವುದು ಸರಿಯಲ್ಲ. ವೈಜ್ಞಾನಿಕವಾಗಿ ವರದಿ ತಯಾರಿಸಬೇಕಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.