ADVERTISEMENT

‘ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಕೊಡವರ ಹಕ್ಕು’

ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಪ್ರತಿಪಾದನೆ, ಸಿಎನ್‌ಸಿಯಿಂದ ವಿಚಾರ ಸಂಕಿರಣ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 6:15 IST
Last Updated 19 ಜೂನ್ 2025, 6:15 IST
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿಯ ಹೊರವಲಯದಲ್ಲಿ ಬುಧವಾರ ನಡೆದ ವಿಚಾರ ಸಂಕಿರಣದಲ್ಲಿ ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಅವರು ಕೊಡವರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿಯ ಹೊರವಲಯದಲ್ಲಿ ಬುಧವಾರ ನಡೆದ ವಿಚಾರ ಸಂಕಿರಣದಲ್ಲಿ ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಅವರು ಕೊಡವರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು   

ಮಡಿಕೇರಿ: ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಕೊಡವರ ಹಕ್ಕು ಎಂದು ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಹೇಳಿದರು.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಇಲ್ಲಿನ ಹೊರವಲಯದಲ್ಲಿ ಬುಧವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಕೊಡವರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು.

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು, ಕೊಡವ ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವುದು, ಆಡಳಿತ ಮತ್ತು ಶಿಕ್ಷಣದ ಮಾಧ್ಯಮವಾಗಿ ಬಳಸುವುದು, ಕೊಡವ ಸಂಸ್ಥೆಗಳಿಗೆ ಸರಿಯಾದ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಸೇರಿದಂತೆ ಇನ್ನೂ ಹಲವು ಹಕ್ಕುಗಳನ್ನು ಕೊಡವರು ಪಡೆಯಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ಕೊಡವ ಭಾಷೆ ಕೇವಲ ಒಂದು ಭಾಷೆ ಮಾತ್ರವಲ್ಲ ಅದು ಕೊಡವರ ಆತ್ಮಸ್ಫೂರ್ತಿ. ಇದಕ್ಕೆ ಯುಗ ಯುಗಗಳ ದೀರ್ಘ ಹಿನ್ನೆಲೆ ಇದೆ. 2017ರಲ್ಲಿ ಸಂಸದ ಬಿ.ಕೆ.ಹರಿಪ್ರಸಾದ್ ಅವರು ಕೊಡವ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸುವ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದರು. ಆದರೆ, ಈ ಕುರಿತು ಮುಂದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇವರಕಾಡುಗಳನ್ನು ವಾಣಿಜ್ಯ ಲಾಭಕ್ಕಾಗಿ ಬಳಸದಂತೆ ಉಳಿಸಬೇಕು. ಕೊಡವ ಪರಂಪರೆಯ ಭೂಮಿ ವಹಿವಾಟಿನಲ್ಲಿ ಸಮುದಾಯದ ನಿಯಂತ್ರಣ ಇರಬೇಕು ಎಂದರು.

ಕೊಡವರಿಗಾಗಿಯೇ ಬೇಕು ಪ್ರತ್ಯೇಕ ಮತಕ್ಷೇತ್ರ: ಸ್ವಾತಂತ್ರ್ಯದ ಬಳಿಕ ಕೊಡಗಿನಿಂದ ಕೇವಲ ಒಬ್ಬ ಕೊಡವ ಮಾತ್ರ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 1967ರಲ್ಲಿ ಸಿಎಂ ಪೂಣಚ್ಚ ಆಯ್ಕೆಯಾಗಿದ್ದು ಬಿಟ್ಟರೇ ಮತ್ತೆ ಯಾರೂ ಆಯ್ಕೆಯಾಗಿಲ್ಲ. ಲಕ್ಷದ್ವೀಪದಲ್ಲಿ 64 ಸಾವಿರ ಜನರಿಗೆ ಪ್ರತ್ಯೇಕ ಸ್ಥಾನ ಇದೆ. ಕೊಡಗಿಗೆ ಪ್ರಾದೇಶಿಕ ಲೋಕಸಭಾ ಕ್ಷೇತ್ರಕ್ಕಿಂತ ಕೊಡವರಿಗಾಗಿಯೇ ಒಂದು ಮತಕ್ಷೇತ್ರ ಬೇಕಾಗಿದೆ. ಮಣಿಪುರ ಮತ್ತು ಸಿಕ್ಕಿಂನ ಮಾದರಿಯಂತೆ ಕೊಡವರಿಗೆ ವಿಶಿಷ್ಟ ಪ್ರತಿನಿಧಿ ಬೇಕು ಎಂದು ಪ್ರತಿಪಾದಿಸಿದರು.

ವಕೀಲ ವಿಕ್ರಮ್ ಹೆಗ್ಡೆ ಹಾಗೂ ಅವರ ಪತ್ನಿ ಕಾನೂನು ತಜ್ಞೆ ಹಿಮಾ ಲಾರೆನ್ಸ್ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಗಮನ ಸೆಳೆದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಮುಖಂಡರಾದ ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ನಂದೇಟಿರ ಕವಿತಾ, ಪುತ್ತರಿರ ಮಧು, ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶಾ, ಚಿರಿಯಪಂಡ ಸುರೇಶ್, ಅರೆಯಡ ಗಿರೀಶ್ ಭಾಗವಹಿಸಿದ್ದರು.

ಕೊಡವರ ರಾಜಕೀಯ ಅಶೋತ್ತರಗಳನ್ನು ಈಡೇರಿಸಲು ವಿಶೇಷ ‘ಪೊಲಿಟಿಕಲ್ ಡಿಸೈನ್‌’ಗಾಗಿ ಸಿಎನ್‌ಸಿ ಆಹೋರಾತ್ರಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ
ಎನ್.ಯು.ನಾಚಪ್ಪ ಸಿಎನ್‌ಸಿ ಅಧ್ಯಕ್ಷ
ಕೊಡವರ ಸಂವಿಧಾನಿಕ ಹಕ್ಕುಗಳಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆಗೆ ಎಲ್ಲಾ ರೀತಿಯ ಬೆಂಬಲ ನೀಡಬೇಕು
ಎಂ.ಟಿ.ನಾಣಯ್ಯ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.