ADVERTISEMENT

ಉತ್ತಮ ನಾಯಕರಿಗಾಗಿ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:15 IST
Last Updated 18 ಡಿಸೆಂಬರ್ 2018, 12:15 IST

ಮಡಿಕೇರಿ: ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ನಾಯಕರನ್ನು ಗುರುತಿಸುವ ಸಲುವಾಗಿ ರಾಜ್ಯದಾದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಅಭಿವೃದ್ಧಿ ರಂಗದ ಸಂಸ್ಥಾಪಕ ಅಧ್ಯಕ್ಷ ತ.ಲ. ರಂಗನಾಥ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಕಾಳಜಿಯುಳ್ಳ ಸಾಮಾಜಿಕ ಚಿಂತಕರು ಹಾಗೂ ಹೋರಾಟಗಾರನ್ನೇ ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕಿದೆ. ಈಗಿರುವ ರಾಜಕೀಯ ವ್ಯಕ್ತಿಗಳಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ. ಜಾತ್ಯತೀತ, ಅನುವಂಶಿಕತೆ, ಹಣ ಬಲದ ಮೇಲೆ ರಾಜಕೀಯ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಉಳಿವು ಮತ್ತು ಸಾಮಾಜಿಕ ಪರಿವರ್ತನೆಗಾಗಿ ‘ಸಾಮಾಜಿಕ ಅಭಿವೃದ್ಧಿ ರಂಗ’ ಸಂಘಟನೆಯನ್ನು ಈಗಾಗಲೇ ಬೆಂಗಳೂರು ನಗರ, ರಾಮನಗರ, ದಾವಣಗೆರೆ, ಶಿವಮೊಗ್ಗ, ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯುವಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳ ಸಮಗ್ರ ಅಧ್ಯಯನ ಹಾಗೂ ಸಾಮಾಜಿಕ ಕಳಕಳಿವುಳ್ಳ ವ್ಯಕ್ತಿಯನ್ನು ಪತ್ತೆಹಚ್ಚಿ ಜನನಾಯಕರಾಗಿ ಹೊರ ಹೊಮ್ಮುವಂತೆ ತರಬೇತಿ ಮತ್ತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕೋಲಾರ ಮಾಜಿ ಸಂಸದ ಡಾ.ಜಿ.ವೆಂಕಟೇಶ್ ಮಾತನಾಡಿ, ಇಂದು ಕುಟುಂಬ ರಾಜಕಾರಣ ದೇಶದಲ್ಲಿ ಮೀತಿಮಿರಿದೆ. ಹಣ, ಹೆಂಡ, ಅಧಿಕಾರದ ದರ್ಪ, ಜಾತಿಯ ಬೆಂಬಲದಿಂದ ಅನರ್ಹರು ಜನಪ್ರತಿನಿಧಿಗಳಾಗುತ್ತಿರೆ. ಅರ್ಹತೆ ಇದ್ದರೂ ಸಹ ಸಾಮಾಜಿಕ ಕಳಕಳಿ ಇರುವವರು ಜನಪ್ರತಿನಿಧಿಗಳಾಗಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ಅಭಿವೃದ್ಧಿ ರಂಗ ಸಂಘಟನೆ ಮೂಲಕ ರಾಜ್ಯದ ಎಲ್ಲ ಕಡೆ ಜನರನ್ನು ಜಾಗೃತಿಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಬಿ.ಡಿ. ಲಿಂಗಪ್ಪ ರೈ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.