ಮಡಿಕೇರಿ: ಯಾವ ಸಾಧನೆಯನ್ನು ಮಾಡಿದೆ ಎಂದು ರಾಜ್ಯ ಸರ್ಕಾರ ಸಾಧನಾ ಸಮಾವೇಶ ನಡೆಸಲು ಹೊರಟಿದೆ ಎಂದು ಬಿಜೆಪಿ ಮುಖಂಡ ಪ್ರತಾಪಸಿಂಹ ಪ್ರಶ್ನಿಸಿದರು.
ನಿರಂತರವಾಗಿ ಏರುತ್ತಿರುವ ಬೆಲೆಗಳು, ಹೆಚ್ಚು ಸಾಲ ಮಾಡಿರುವುದು, ‘ಮುಡಾ’ ಹಗರಣ, ವಾಲ್ಮೀಕಿ ನಿಗಮದ ಅನುದಾನದ ದುರುಪಯೋಗ, ಆತ್ಯಹತ್ಯೆ ಪ್ರಕರಣ ಎದುರಿಸುತ್ತಿರುವವರ ರಕ್ಷಣೆ, ಕೊಡಗು ವಿಶ್ವವಿದ್ಯಾಲಯ ಮುಚ್ಚಲು ಮುಂದಾಗಿರುವುದು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿರುವುದಷ್ಟೇ ಸರ್ಕಾರದ ಸಾಧನೆಗಳಾಗಿವೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸುವುದಕ್ಕಾಗಿ ಮಿತಿ ಮೀರಿ ಸಾಲ ಮಾಡಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನು ಕೇಂದ್ರದಿಂದ ಖರೀದಿ ಮಾಡಲು ರಾಜ್ಯದ ಬಳಿ ಹಣವಿಲ್ಲ. ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ಅನುದಾನಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದರು.
ಏಕಕಾಲದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಿದರೆ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ತಿಳಿದೇ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂದೂ ಅವರು ತಿಳಿಸಿದರು.
‘ಬಿಜೆಪಿ ಶಾಸಕರಿಬ್ಬರು ತಂದ ಯೋಜನೆಗಳನ್ನು ನಮ್ಮದು ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಬಹಿರಂಗ ಚರ್ಚೆಗೆ ಬನ್ನಿ’ ಎಂದೂ ಸವಾಲೆಸೆದರು.
ಇದೇ ವೇಳೆ ‘ದುಬಾರಿ ಜೀವನ-ಅಭಿವೃದ್ಧಿ ಶೂನ್ಯ ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ’ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲಿರ ಚಲನ್ ಕುಮಾರ್ ಭಾಗವಹಿಸಿದ್ದರು.
ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಕಳೆದ ಎರಡು ವರ್ಷಗಳಲ್ಲಿ ಮಡಿಕೇರಿ ಶಾಸಕರು ಕೊಡಗಿಗೆ ತಂದಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ’ ಎಂದು ಸವಾಲೆಸೆದರು.
ಬಿಜೆಪಿ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಮಾತನಾಡಿ, ‘ಕೊಡಗು ಜಿಲ್ಲೆ ಸೇರಿದಂತೆ ಇಡೀ ಕರ್ನಾಟಕ ರಾಜ್ಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ನಿತ್ಯ ಕೊಲೆ, ದರೋಡೆ, ಅತ್ಯಾಚಾರ ನಡೆಯುತ್ತಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.