ADVERTISEMENT

‘ಸಂಘಕ್ಕೆ ಆಸ್ತಿ, ಜವಾಬ್ದಾರಿ ಹಸ್ತಾಂತರಿಸಿ’

ಕುಂದಚೇರಿ ಕೃಷಿ ಪತ್ತಿನ ಸಹಕಾರ ಸಂಘ ಪದಾಧಿಕಾರಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:53 IST
Last Updated 24 ಜೂನ್ 2019, 12:53 IST

ಮಡಿಕೇರಿ: ‘ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದಿಂದ ಕುಂದಚೇರಿ ಸಹಕಾರ ಸಂಘಕ್ಕೆ ಆಸ್ತಿ ಮತ್ತು ಜವಾಬ್ದಾರಿಯನ್ನು ಹಸ್ತಾಂತರಿಸಬೇಕು’ ಎಂದು ಕುಂದಚೇರಿ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಕೀರ್ತಿಕುಮಾರ್ ಆಗ್ರಹಿಸಿದರು.

‘ಒಂದು ಪಂಚಾಯಿತಿಗೆ ಒಂದೇ ಸಹಕಾರ ಸಂಘ ಇರಬೇಕು ಎನ್ನುವ ಸರ್ಕಾರದ ಆದೇಶದಂತೆ ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕುಂದಚೇರಿ, ಪದಕಲ್ಲು, ಸಿಂಗತ್ತೂರು, ಚೆರಂಡೇಟಿ ಗ್ರಾಮವನ್ನು ವಿಭಜಿಸಿ ಬೈಲಾ ತಿದ್ದುಪಡಿಯಾಗಿದೆ. ಆದರೆ, ಭಾಗಮಂಡಲ ಸಂಘದ ಆಡಳಿತ ಮಂಡಳಿ ಆಸ್ತಿ ಮತ್ತು ಜವಾಬ್ದಾರಿಯನ್ನು ವರ್ಗಾಯಿಸದೇ ಸರ್ಕಾರದ ಉದ್ದೇಶ ಈಡೇರಿಕೆಗೆ ಅಡಚಣೆಯಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ದೂರಿದರು.

ಜಿಲ್ಲೆಯಲ್ಲಿ ಇದೆ ಮಾದರಿಯಲ್ಲಿ ತೊರೆನೂರು, ನಾಲ್ಕೇರಿ, ಪೆರಾಜೆ ಅದರ ಕಾರ್ಯ ವ್ಯಾಪ್ತಿಯನ್ನು ಪ್ರಾರಂಭಿಸಿದೆ. ಆದರೆ, ಭಾಗಮಂಡಲದ ಸಂಘದ ಆಡಳಿತ ಮಂಡಳಿ ನೂತನವಾಗಿ ರಚಿಸಲ್ಪಟ್ಟ ಕುಂದಚೇರಿ ಸಹಕಾರ ಸಂಘದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ADVERTISEMENT

ಇನ್ನು ಬೈಲಾ ತಿದ್ದುಪಡಿಗೊಂಡು ಗ್ರಾಮಗಳಿಗೆ ಸಂಘಗಳನ್ನು ವಿಭಾಗಿಸಿದ್ದರೂ, ಕುಂದಚೇರಿ ಗ್ರಾಮದ ವ್ಯಾಪ್ತಿಗೆ ಬರುವ ಸದಸ್ಯರನ್ನು ನೇರವಾಗಿ ಪತ್ರದ ಮೂಲಕ ಸಂಪರ್ಕಿಸಿ 7 ದಿನದೊಳಗಾಗಿ ಭಾಗಮಂಡಲದ ಸಹಕಾರ ಸಂಘಕ್ಕೆ ಹಣ ಮರುಪಾವತಿ ಮಾಡಿ, ನಿಮ್ಮ ಷೇರುಗಳನ್ನು ವರ್ಗಾಯಿಸಿಕೊಳ್ಳಿ ಎಂದು ಭಾಗಮಂಡಲ ಸಂಘದ ಆಡಳಿತ ಮಂಡಳಿಯವರು ಒತ್ತಡ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ರೈತರು ಕೃಷಿ ಸಾಲವನ್ನು ಪಡೆದು ಕೆಲವೇ ದಿನಗಳು ಆಗಿರುವುದರಿಂದ ವಾರದೊಳಗೆ ಮರುಪಾವತಿ ಕಷ್ಟ ಸಾಧ್ಯ. ಇದರಿಂದ ಕುಂದಚೇರಿ ವ್ಯಾಪ್ತಿಗೆ ಒಳಪಡುವ 700ಕ್ಕೂ ಹೆಚ್ಚು ಸದಸ್ಯರು ಗೊಂದಲದಲ್ಲಿದ್ದು, ಈಗಾಗಲೇ ಯಾವುದೇ ಕಾನೂನು ಬಾಹಿರ ಪತ್ರಗಳಿಗೆ ಸಹಿ ಹಾಕದಂತೆಯೂ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಂದಚೇರಿ ಸಹಕಾರ ಸಂಘದ ಉಪಾಧ್ಯಕ್ಷ ಡಿ.ಸಿ.ಶ್ರೀಧರ್‌, ನಿರ್ದೇಶಕ ಕೆ.ಎಸ್.ಜಯಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.