ADVERTISEMENT

ಕೊಡಗಿನಲ್ಲಿ ತಗ್ಗಿದ ಮಳೆ: ಮಾಣಿ– ಬೆಂಗಳೂರು ಹೆದ್ದಾರಿ ತಡೆಗೋಡೆಯಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 19:37 IST
Last Updated 31 ಜುಲೈ 2025, 19:37 IST
ಮಾಣಿ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ಕ್ಕೆ ಮಡಿಕೇರಿ ಸಮೀಪ ಕಟ್ಟಿದ್ದ ತಡೆಗೋಡೆಯಲ್ಲಿ ಬಿರುಕುಗಳು ಮೂಡಿರುವುದು
ಮಾಣಿ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ಕ್ಕೆ ಮಡಿಕೇರಿ ಸಮೀಪ ಕಟ್ಟಿದ್ದ ತಡೆಗೋಡೆಯಲ್ಲಿ ಬಿರುಕುಗಳು ಮೂಡಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ, ಗಾಳಿ ಕಡಿಮೆಯಾಗಿದೆ. ಆದರೆ, ಮಡಿಕೇರಿ– ಮಂಗಳೂರನ್ನು ಸಂಪರ್ಕಿಸುವ ಮಾಣಿ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿರ್ಮಿಸಿದ್ದ ತಡೆಗೋಡೆಯೊಂದರಲ್ಲಿ ಬಿರುಕು ಕಂಡು ಬಂದಿದೆ. 

ಮಡಿಕೇರಿಯಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ತಡೆಗೋಡೆಯ ಕೆಳಭಾಗದಲ್ಲಿ ವಾಸವಿದ್ದ 5 ಕುಟುಂಬಗಳ ಪೈಕಿ 4 ಕುಟುಂಬದ 10 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಂದು ಕುಟುಂಬದವರು ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದೇ ಅಲ್ಲಿಯೇ ವಾಸವಿದ್ದಾರೆ. 

‘ದೊಡ್ಡ ತಡೆಗೋಡೆಗೆ ಏನೂ ಆಗಿಲ್ಲ. ಅದಕ್ಕೆ ಬೆಂಬಲವಾಗಿ 2022ರಲ್ಲಿ ನಿರ್ಮಿಸಿದ್ದ ತಡೆಗೋಡೆಯಲ್ಲಿ ಬಿರುಕು ಕಾಣಿಸಿದೆ. ಸರಿಪಡಿಸುವ ಕಾರ್ಯ ಶುಕ್ರವಾರದಿಂದಲೆ ಆರಂಭವಾಗಲಿದೆ. ಸದ್ಯ, ಹೆಚ್ಚಿನ ಆತಂಕ ಇಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಚ್‌.ಗಿರೀಶ ‘ಪ್ರಜಾವಾಣಿ’ಗೆ ತಿಳಿಸಿದರು. 2018–19ರಲ್ಲಿ ಸುರಿದ ಭಾರಿ ಮಳೆಯಿಂದ ಇಲ್ಲಿ ಮಣ್ಣು ಕುಸಿದಿತ್ತು.

ADVERTISEMENT

ಸಂಪಾಜೆಯಲ್ಲಿ 6 ಸೆಂ.ಮೀ, ಶಾಂತಳ್ಳಿಯಲ್ಲಿ 4, ಮಡಿಕೇರಿಯಲ್ಲಿ 3, ಭಾಗಮಂಡಲದಲ್ಲಿ 2.4 ಸೆಂ.ಮೀನಷ್ಟು ಮಳೆಯಾಗಿದೆ.

ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಬೆಟ್ಟ ತಡಿಯಂಡಮೋಳ್ ಬೆಟ್ಟದ ಮಾರ್ಗವು ಮಳೆಯಿಂದ ಅಪಾಯಕಾರಿಯಾಗಿ ಪರಿಣಮಿಸಿದ್ದು, ಪ್ರವಾಸಿಗರ ಚಾರಣ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. 

ಬಿರುಕು ಬಿಟ್ಟಿರುವ ತಡೆಗೋಡೆಯನ್ನು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಗುರುವಾರ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.