ಸಿದ್ದಾಪುರ: ಸಿದ್ದಾಪುರ ಭಾಗದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕಾವೇರಿ ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ನದಿಯ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕರಡಿಗೋಡು-ಚಿಕ್ಕನಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು ಗ್ರಾಮದ ನದಿ ದಡದ ಸುಮಾರು 8 ಮನೆಗಳ ಸಮೀಪದ ನೀರು ಹರಿಯುತ್ತಿದ್ದು, ಕಂದಾಯ ಇಲಾಖೆಯಿಂದ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಇಲಾಖೆ ನದಿ ದಡದ ನಿವಾಸಿಗಳು ಕಾಳಜಿ ಕೇಂದ್ರಕ್ಕೆ ತೆರಳಬೇಕೆಂದು ಕಂದಾಯ ಇಲಾಖೆ ಮನವಿ ಮಾಡಿದ್ದರು. ಗುರುವಾರ ಸಂಜೆಯವರೆಗೆ ಯಾರೂ ಕಾಳಜಿ ಕೇಂದ್ರಕ್ಕೆ ತೆರಳಿಲ್ಲ.
ಭಾರಿ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗುಹ್ಯ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ರಸ್ತೆ ಜಲಾವೃತಗೊಂಡಿದ್ದು, ಕಕ್ಕಟ್ಟುಕಾಡು ಗ್ರಾಮಕ್ಕೆ ತೆರಳುವ ಸಂಪರ್ಕ ಸ್ಥಗಿತಗೊಂಡಿದೆ. ನೆಲ್ಯಹುದಿಕೇರಿಯ ಕುಂಬಾರಗುಂಡಿ, ಬರಡಿ, ಬೆಟ್ಟದಕಾಡು ವ್ಯಾಪ್ತಿಯಲ್ಲೂ ಪ್ರವಾಹದ ಭೀತಿ ಎದುರಾಗಿದ್ದು, ಕಂದಾಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಮಳೆ ನಿರಂತರವಾಗಿ ಸುರಿಯುತ್ತಿದ್ದು, ನದಿ ನೀರು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸ್ಥಳಕ್ಕೆ ವಿರಾಜಪೇಟೆ ತಹಶೀಲ್ದಾರ್ ಅನಂತ್ ಶಂಕರ್, ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮ ಆಡಳಿತ ಅಧಿಕಾರಿ ಭಾನುಪ್ರಿಯ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.