ADVERTISEMENT

ಮಡಿಕೇರಿ | ಸಿಎನ್‌ಸಿ’ಯಿಂದ ‘ಕಕ್ಕಡ-18’: ಸಡಗರದ ಆಚರಣೆ, ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:40 IST
Last Updated 3 ಆಗಸ್ಟ್ 2025, 4:40 IST
ಮಡಿಕೇರಿಯ ಹೊರವಲಯದಲ್ಲಿ ಶನಿವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ನಡೆದ ‘ಕಕ್ಕಡ 18’ ಆಚರಣೆಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಕೋವಿಯನ್ನು ಹೆಗಲಿಗೇರಿಸಿ ಗುರಿ ನೆಟ್ಟರು
ಮಡಿಕೇರಿಯ ಹೊರವಲಯದಲ್ಲಿ ಶನಿವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ನಡೆದ ‘ಕಕ್ಕಡ 18’ ಆಚರಣೆಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಕೋವಿಯನ್ನು ಹೆಗಲಿಗೇರಿಸಿ ಗುರಿ ನೆಟ್ಟರು   

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯು ನಗರದ ಹೊರವಲಯದಲ್ಲಿ ಶನಿವಾರ ‘ಕಕ್ಕಡ-18’ ಅನ್ನು ಸಂಭ್ರಮ, ಸಡಗರದಿಂದ ಆಚರಿಸಿತು. ಜೊತೆಗೆ, ಹಲವು ಹಕ್ಕೋತ್ತಾಯಗಳನ್ನು ಮಂಡಿಸಿತು.

ಮೊದಲಿಗೆ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು. ‘ಕಕ್ಕಡ-18’ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್‌ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲಾಯಿತು.

ಕೊಡವ ಲ್ಯಾಂಡ್ ಪರ ಸೂರ್ಯ-ಚಂದ್ರ ಗುರು-ಕಾರೋಣ, ಜಲ ದೇವತೆ ಕಾವೇರಿ, ವನ ದೇವಿ, ಭೂ ದೇವಿ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅಲ್ಲದೆ, ಸಿಎನ್‌ಸಿಯ ಬೇಡಿಕೆಗಳ ಪರ ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಇಂತಹದ್ದೊಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, ಸಂವಿಧಾನಬದ್ಧವಾಗಿರುವ ಕೊಡವರ ಬೇಡಿಕೆಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನಬದ್ಧವಾಗಿರುವ ಕೊಡವರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕು ಎಂದೂ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ‘ನಾವು ಸಂವಿಧಾನಬದ್ಧವಾಗಿಯೇ ಈ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು.

ಕೊಡವ ಧ್ಯೇಯವನ್ನು ಪ್ರತಿಪಾದಿಸುವ ಮತ್ತು ಅವರ ಹಕ್ಕುಗಳು, ಹಿತಾಸಕ್ತಿಗಳನ್ನು ಪ್ರತಿಪಾದಿಸುವ ಯಾವುದೇ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಹಾಗೂ ಕೊಡವ ಹಿತಾಸಕ್ತಿಗಳಿಗೆ ಪ್ರತಿಕೂಲವಾಗಿರುವ ಅಭ್ಯರ್ಥಿಗಳನ್ನು ಅವರ ಪಕ್ಷದ ಸದಸ್ಯತ್ವವನ್ನು ಲೆಕ್ಕಿಸದೆ ವಿರೋಧಿಸಬೇಕು ಎಂದು ಕರೆಕೊಟ್ಟರು.

ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು, ಆರ್ಟಿಕಲ್ 244ನೇ ವಿಧಿ ಮತ್ತು 6 ಮತ್ತು 8ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು, ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೊದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳ್ಳುವವರೆಗೆ ನಿರಂತರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದ ಅವರು, ಭೂಮಾಫಿಯಾದಿಂದ ಕೊಡವ ಭೂಮಿಯನ್ನು ರಕ್ಷಿಸಿಕೊಳ್ಳಲು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ಒಂದೇ ಪರಿಹಾರ ಎಂದು ಪ್ರತಿಪಾದಿಸಿದರು.

ಮಡಿಕೇರಿಯ ಹೊರವಲಯದಲ್ಲಿ ಶನಿವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ನಡೆದ ‘ಕಕ್ಕಡ 18’ ಆಚರಣೆಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿದರು

ಕಲಿಯಂಡ ಮೀನಾಕ್ಷಿ, ಅಪ್ಪಚ್ಚಿರ ರೀನಾ, ಪುಲ್ಲೇರ ಸ್ವಾತಿ, ನಂದೇಟಿರ ಕವಿತಾ, ನಂದಿನೆರವಂಡ ರೇಖಾ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಬಾಚರಣಿಯಂಡ ಚಿಪ್ಪಣ್ಣ, ಅಪ್ಪಚ್ಚೀರ ರಮ್ಮಿ, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್ ಭಾಗವಹಿಸಿದ್ದರು.

ಮಡಿಕೇರಿಯ ಹೊರವಲಯದಲ್ಲಿ ಶನಿವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ನಡೆದ ‘ಕಕ್ಕಡ 18’ ಆಚರಣೆಯಲ್ಲಿ ಸಂಘಟಣೆಯ ಅಧ್ಯಕ್ಷ ಎನ್.ಯು.ನಾಚಪ್ಪ ಸಾಂಪ್ರದಾಯಿಕವಾಗಿ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.