ADVERTISEMENT

ಕೊಡವ ಸ್ವಾಯತ್ತತೆ ಕೋರಿ ಪ್ರತಿಭಟನೆ

ಫ್ರೆಂಚ್ ಆಡಳಿತದ ಕ್ಷಮೆ ಯಾಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 2:26 IST
Last Updated 2 ನವೆಂಬರ್ 2019, 2:26 IST
ಕೊಡವ ಸ್ವಾಯತ್ತತೆಗಾಗಿ ಆಗ್ರಹಿಸಿ ನವದೆಹಲಿಯ ಜಂತರ್‌ ಮಂತರ್‌ ಬಳಿ ಶುಕ್ರವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ)ವತಿಯಿಂದ ಇಲ್ಲಿ ಪ್ರತಿಭಟನೆ ನಡೆಸಲಾಯಿತು
ಕೊಡವ ಸ್ವಾಯತ್ತತೆಗಾಗಿ ಆಗ್ರಹಿಸಿ ನವದೆಹಲಿಯ ಜಂತರ್‌ ಮಂತರ್‌ ಬಳಿ ಶುಕ್ರವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ)ವತಿಯಿಂದ ಇಲ್ಲಿ ಪ್ರತಿಭಟನೆ ನಡೆಸಲಾಯಿತು   

ನವದೆಹಲಿ: ಟಿಪ್ಪು ಸುಲ್ತಾನನ ಸೈನ್ಯಕ್ಕೆ ಆಧುನಿಕ ಶಸ್ತ್ರಾಸ್ತ್ರ ಒದಗಿಸಿದ್ದ ಫ್ರೆಂಚ್ ಆಡಳಿತವು ಕೊಡವರ ಮೇಲಿನ ಆತನ ದಾಳಿಗೆ ಪರೋಕ್ಷ ಬೆಂಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ತೀನ್‌ಮೂರ್ತಿ ಭವನದ ಆವರಣದಿಂದ ಫ್ರೆಂಚ್ ರಾಯಭಾರಿ ಕಚೇರಿವರೆಗೆ ರ್‍ಯಾಲಿ ಮೂಲಕ ತೆರಳಿದ ಪ್ರತಿಭಟನಾಕಾರರು, 231 ವರ್ಷಗಳ ಹಿಂದೆ ಕೊಡವ ಬುಡಕಟ್ಟುಗಳ ಮೇಲೆ ಟಿಪ್ಪು ನಡೆಸಿದ ದೇವಟ್ಟಿಪರಂಬು ಹತ್ಯಾಕಾಂಡವು ಕೊಡವರ ಪಾಲಿಗೆ ಕರಾಳವಾದುದಾಗಿದೆ ಎಂದು ತಿಳಿಸಿದರು.

ಇಂಥ ಆಕ್ರಮಣಗಳಿಗೆ ಫ್ರೆಂಚ್‌ ಆಡಳಿತದ ಬೆಂಬಲ ಇತ್ತು. ಕೊಡವರ ಮಾರಣಹೋಮಕ್ಕೆ ಕಾರಣವಾದ ಆ ಘಟನೆಯ ಬಗ್ಗೆ ಫ್ರೆಂಚ್‌ ಆಡಳಿತ ಕ್ಷಮೆ ಯಾಚಿಸಬೇಕು ಎಂದು ಕೋರಿದ ಸಿಎನ್‌ಸಿ ಸದಸ್ಯರು ಹಾಗೂ ಕೊಡವ ಸಮುದಾಯದವರು ಫ್ರಾನ್ಸ್‌ನ ಕಾನ್ಸುಲೇಟ್ ಜನರಲ್ ಅವರಿಗೆ ಈ ಕುರಿತ ಮನವಿ ಸಲ್ಲಿಸಿದರು.

ADVERTISEMENT

ನಂತರ ಕೊಡವ ಸ್ವಾಯತ್ತತೆಗಾಗಿ ಆಗ್ರಹಿಸಿ ಇಲ್ಲಿನ ಜಂತರ್‌ ಮಂತರ್‌ ಬಳಿ ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಸದಸ್ಯರು, ಈ ಕುರಿತ ಮನವಿಯನ್ನು ಪ್ರಧಾನಿ, ಕೇಂದ್ರದ ಗೃಹ ಸಚಿವರಿಗೆ ಸಲ್ಲಿಸಿದರು.

ಕೌನ್ಸಿಲ್‌ ಅಧ್ಯಕ್ಷ ಎನ್.ಯು. ನಾಚಪ್ಪ, ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಅಜಿಕುಟ್ಟೀರಾ ಲೋಕೇಶ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಚಿಮ್ಮಣಮಾಡ ರಾಜ, ಕಾಟುಮಣಿಯಂಡ ಉಮೇಶ್, ಕಾಂಡೇರ ಸುರೇಶ್, ನಂದಿನೆರವಂಡ ವಿಜು, ಚಂಗಂಡ ಚಮಿ, ಬಿ.ಎಂ. ಪಾರ್ವತಿ, ಮೇಚಂಡ ಕಿಶಾ, ಬೋಸ್ ಪಾರುವಂಗಡ, ದಿಲನ್ ಕರ್ತಾಂಡ, ಮಾಚಿಮಡ ಲವ, ಬೊಟ್ಟಂಗಡ ಜಪ್ಪು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.