ADVERTISEMENT

ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಕುಡೆಕಲ್ ಸಂತೋಷ್ ಆಯ್ಕೆ

ಮಡಿಕೇರಿ ದಸರಾ ಸಮಿತಿ ಸಭೆ: ಲೆಕ್ಕ ಪತ್ರದ ಬಗ್ಗೆ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:54 IST
Last Updated 28 ಜುಲೈ 2025, 6:54 IST
ಮಡಿಕೇರಿ ದಸರಾ ಸಮಿತಿ ಸಭೆಯನ್ನು ನಗರಸಭೆ ಅಧ್ಯಕ್ಷೆ ಕಲಾವತಿ ಉದ್ಘಾಟಿಸಿದರು
ಮಡಿಕೇರಿ ದಸರಾ ಸಮಿತಿ ಸಭೆಯನ್ನು ನಗರಸಭೆ ಅಧ್ಯಕ್ಷೆ ಕಲಾವತಿ ಉದ್ಘಾಟಿಸಿದರು   

ಮಡಿಕೇರಿ: ತೀವ್ರ ಕುತೂಹಲ ಕೆರಳಿಸಿದ್ದ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಾಟರಿ ಮೂಲಕ ಕುಡೆಕಲ್ ಸಂತೋಷ್ ಆಯ್ಕೆಯಾದರು.

ಆರಂಭದಲ್ಲಿ ತೆನ್ನಿರಾ ಮೈನಾ, ಕುಡೆಕಲ್ ಸಂತೋಷ್ ಮಧ್ಯೆ ಪೈಪೋಟಿ ಏರ್ಪಟ್ಟಿತು. ನಂತರ, ಕಾಶಿ, ಸತೀಶ್, ಮೋಹನ್ ಉಮೇಶ್ ಸುಬ್ರಮಣಿ ಅವರೂ ಕಣಕ್ಕೆ ಇಳಿದರು. ಅಂತಿಮವಾಗಿ ಲಾಟರಿ ಮೂಲಕ ಮುಂದಿನ ಎರಡು ವರ್ಷಗಳ ಅವಧಿಗೆ ಕುಡೆಕಲ್ ಸಂತೋಷ್ ಆಯ್ಕೆಯಾದರು.

ದಶಮಂಟಪಗಳಿಂದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದ ಬಿ.ಕೆ.ಅರುಣ್‌ಕುಮಾರ್ ಅವರನ್ನು ಅಧಿಕೃತವಾಗಿ ಕಾರ್ಯಾಧ್ಯಕ್ಷರಾಗಿ ಘೋಷಿಸಲಾಯಿತು. ಉಳಿದಂತೆ, ಸಾರ್ವಜನಿಕ ಕ್ಷೇತ್ರದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಡಿಶು,  ನಗರಸಭಾ ಸದಸ್ಯರಿಗೆ ಮೀಸಲಾದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅರುಣ್ ಶೆಟ್ಟಿ, ಖಜಾಂಚಿ ಸ್ಥಾನಕ್ಕೆ ಸಬಿತಾ ಆಯ್ಕೆಯಾದರು.

ADVERTISEMENT

ಸಾರ್ವಜನಿಕ ಕ್ಷೇತ್ರದಿಂದ ಕಾರ್ಯದರ್ಶಿ ಸ್ಥಾನಕ್ಕೆ ಕಾನೆಹಿತ್ಲು ಮೊಣ್ಣಪ್ಪ, ಅಲಂಕಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮುನೀರ್ ಮಾಚಾರ್, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಉಜ್ವಲ್ ರಂಜಿತ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಜ್ಜೆಟಿರ ಲೋಕೇಶ್, ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಪ್ರದೀಪ್ ಕರ್ಕೆರ, ಯುವ ದಸರಾ ಅಧ್ಯಕ್ಷರಾಗಿ ಕೊತ್ತೊಳಿ ಕವನ್ ಆಯ್ಕೆಯಾದರು.

ಈ ಆಯ್ಕೆ ಪ್ರಕ್ರಿಯು ಇಲ್ಲಿ ನಗರಸಭಾ ಅಧ್ಯಕ್ಷೆ ದಸರಾ ಸಮಿತಿ ಅಧ್ಯಕ್ಷರಾದ ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು. ಆದರೆ, ಕಳೆದ ಬಾರಿಯ ದಸರಾ ಲೆಕ್ಕಪತ್ರದ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.

ಕಳೆದ ಬಾರಿಯ ಲೆಕ್ಕಪತ್ರವನ್ನು ಸಮಿತಿಯ ಗೌರವ ಕಾರ್ಯದರ್ಶಿ ಹಾಗೂ ನಗರಸಭಾ ಆಯುಕ್ತ ರಮೇಶ್ ಮಂಡಿಸಿದರು. ಇದಕ್ಕೆ ವ್ಯಾಪಕ ಆಕ್ಷೇಪಗಳು ಕೇಳಿ ಬಂದವು.

ಕಳೆದ ಬಾರಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ‘ದಸರಾ ಹಣದ ಜವಾಬ್ದಾರಿಯನ್ನು ಕಳೆದ ಬಾರಿ ಜಿಲ್ಲಾಧಿಕಾರಿಗಳೇ ವಹಿಸಿಕೊಂಡರು. ಕಾರ್ಯಕ್ರಮದ ರೂಪುರೇಷೆಯನ್ನು ಮಾತ್ರ ನಾವು ಮಾಡಿದ್ದೇವೆ. ಹಣಕಾಸಿನ ವಿಚಾರವನ್ನು ಜಿಲ್ಲಾಧಿಕಾರಿ ಹಾಗೂ ಆಯುಕ್ತರು ನೋಡಿಕೊಳ್ಳುತ್ತಿದ್ದರು. ಹಣಕಾಸಿನ ವಿಚಾರದಲ್ಲಿ ನಾನು ಏನೂ ಮಾಡಿಲ್ಲ. ನನ್ನ ಕೈಯಿಂದ ಖರ್ಚಾದ ಹಣ ಕೂಡ ನನಗೆ ಸಿಗಲಿಲ್ಲ’ ಎಂದು ಹೇಳಿದರು.

ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ರಾಜಕೀಯ ರಹಿತವಾಗಿ ಸರ್ವರ ಸಹಕಾರದೊಂದಿಗೆ ದಸರಾ ಉತ್ಸವ ಆಚರಿಸಲಾಗುವುದು ಎಂದರು.

ಕಳೆದ ಬಾರಿಯ ದಶಮಂಟಪ ಸಮಿತಿ ಅಧ್ಯಕ್ಷ ಜೆ.ಸಿ.ಜಗದೀಶ್, ಈ ಬಾರಿಯ ಅಧ್ಯಕ್ಷ ಹರೀಶ್ ಅಣ್ವೇಕರ್, ಉಪಾಧ್ಯಕ್ಷ ಬಾಬು, ಸಹ ಕಾರ್ಯದರ್ಶಿ ಮುದ್ದುರಾಜ್, ನಗರಸಭಾ ಸದಸ್ಯರಾದ ಸಬಿತಾ, ಸವಿತಾ ರಾಕೇಶ್, ಸದಾಮುದ್ದಪ್ಪ, ಚಂದ್ರಶೇಖರ್, ಸತೀಶ್ ಭಾಗಹಿಸಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿಯ ಸದಸ್ಯರು
ದಸರಾ ಹಣದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಮತ್ತೊಂದು ಸಭೆ ಕರೆದು ಖರ್ಚು ವೆಚ್ಚದ ಸಂಪೂರ್ಣ ಮಾಹಿತಿ ನೀಡಲಾಗುವುದು.
– ರಾಜೇಶ್ ಯಲ್ಲಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ

‘ಕಲಾವಿದರ ಹಣ ಬಾಕಿ’

‘ದಸರಾ ಇತಿಹಾಸದಲ್ಲಿ ₹ 32 ಲಕ್ಷ ಸಾಲ ಇಟ್ಟುಕೊಂಡು ಮುಂದುವರಿಯುತ್ತಿರುವುದು ಸರಿಯಲ್ಲ. ಬೆಂಗಳೂರಿನಿಂದ ಬಂದ ಹೆಸರಾಂತ ಕಲಾವಿದರಿಗೂ ಕೂಡ ಹಣ ಪಾವತಿಗೆ ಬಾಕಿ ಇದೆ ಎಂಬ ಮಾಹಿತಿಯನ್ನು ಆಯುಕ್ತರು ನೀಡಿದ್ದು ಈ ಬಾರಿ ಅಂತಹ ಕಲಾವಿದರು ಮಡಿಕೇರಿಗೆ ಕರೆದರೆ ಬರಲಾರರು. ಒಂದೂವರೆ ಕೋಟಿಗೆ ಸೀಮಿತವಾಗಿ ಉತ್ಸವವನ್ನು ಆಚರಣೆ ಮಾಡುವತ್ತ ಸಮಿತಿ ಗಮನ ಹರಿಸಬೇಕಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಒಪ್ಪಿಸುವ ಕೆಲಸವನ್ನು ಸಮಿತಿಯ ಪದಾಧಿಕಾರಿಗಳು ಮಾಡಬೇಕಿತ್ತು. ಅದನ್ನು ಬಿಟ್ಟು ಹಣದ ಕೊರತೆಯನ್ನು ತೋರಿಸಿರುವುದು ಎಷ್ಟು ಸಮಂಜಸ’ ಎಂದು ಸಮಿತಿಯ ಗೌರವಾಧ್ಯಕ್ಷ ಜಿ.ಚಿದ್ವಿಲಾಸ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.