ಕುಶಾಲನಗರ: ‘ದೇಶದ ಆತಂಕರಿಕ ಭದ್ರತೆ ಹಾಗೂ ಏಕತೆ ವಿಚಾರದಲ್ಲಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ’ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಹೇಯಕೃತ್ಯ ಖಂಡನೀಯ. ಪ್ರತ್ಯುತ್ತರವಾಗಿ ಪ್ರಧಾನಿ ತೆಗದುಕೊಳ್ಳುವ ನಿರ್ಧಾರಕ್ಕೆ ಎಲ್ಲರ ಸಹಮತವಿದೆ. ಕಾಂಗ್ರೆಸ್ ಕೂಡ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದೆ. ಭಿನ್ನ ನಿಲುವಿನ ಪ್ರಶ್ನೆಯೇ ಬರುವುದಿಲ್ಲ. ಪ್ರಧಾನಿಯ ನಿರ್ಧಾರವನ್ನು ದೇಶವೇ ಬೆಂಬಲಿಸಲಿದೆ ಎಂದರು.
ಬಾಂಗ್ಲಾ ವಲಸೆ ಸಮಸ್ಯೆ: ‘ಬಾಂಗ್ಲಾದೇಶದಿಂದ ವಲಸೆ ಕಾರ್ಮಿಕರು ದೇಶದೊಳಗೆ ಬರುತ್ತಿದ್ದಾರೆ ಎಂಬುದು ಆತಂಕದ ವಿಷಯ. ಆದರೆ ಗಡಿ ಕಾಯುತ್ತಿರುವವರು ಯಾರು? ಹನ್ನೊಂದು ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಜೊತೆಗೆ ಬಾಂಗ್ಲಾ ದವರು ಬಂದಿದ್ದಾರೆ ಎಂದು ಇವರೇ ಹೇಳುತ್ತಿದ್ದಾರೆ. ಹೀಗದರೆ ಈ ದೇಶ ಹೇಗೆ ಸುರಕ್ಷಿತ ಇರಬಹುದು ಎಂಬುದಾಗಿ ಅವರನ್ನೇ ಪ್ರಶ್ನೆ ಮಾಡಬೇಕಾಗಿದೆ’ ಎಂದರು. ‘ಇದು ಗಂಭೀರ ವಿಚಾರವಾಗಿದ್ದು, ವಲಸೆ ನಿಯಂತ್ರಣಕ್ಕೆ ಸರ್ಕಾರ ಕಠಿಣನಿಲುವು ತೆಗದುಕೊಳ್ಳಬೇಕಾಗಿದೆ ಎಂದರು. ಬಾಂಗ್ಲಾ ಪ್ರಜೆಗಳು ಕಂಡು ಬಂದರೆ ಪೊಲೀಸ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಸಚಿವರು ಮನವಿ ಮಾಡಿದರು.
ಬಸವ ಜಯಂತಿ ಹಾಗೂ ಕಾರ್ಮಿಕ ಜಯಂತಿ ಶುಭಹಾರೈಸಿ ಮಾತನಾಡಿದ ಸಚಿವ ಲಾಡ್, ಅಸಂಘಟಿತ ಕಾರ್ಮಿಕ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಪಿ ಶಶಿಧರ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖಂಡರಾದ ಶಿವಶಂಕರ್, ಪ್ರಕಾಶ್,ರಂಜನ್ ಹೆಬ್ಬಾಲೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.