ಕುಶಾಲನಗರ: ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಕಾಂತಾನಂದ ಸರಸ್ವತಿ ಮಹಾರಾಜ್ ನೇತೃತ್ವದಲ್ಲಿ ಕೋಟಿ ರುದ್ರಜಪ ಪಾರಾಯಣ, ಜಪಯಜ್ಞ ನಡೆಯಿತು.
ಮಂಗಳವಾರ ಮತ್ತು ಬುಧವಾರ ಕಾರ್ಯದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಋತ್ವಿಕರು ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಶ್ರೀರಾಮಲಿಂಗೇಶ್ವರ ದೇವರ ಮೂರ್ತಿಗೆ ಪುಷ್ಪಗಳಿಂದ ವಿಶೇಷ ಅಲಂಕಾರ ಹಾಗೂ ಪೂಜೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರಿಂದ ನಡೆಯಿತು.
ದೇವಾಲಯದ ಆವರಣದಲ್ಲಿ ದೇವಳ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಉಪಸ್ಥಿತಿಯಲ್ಲಿ ಚಂಡಿಕಾ ಹೋಮ ಜರುಗಿತು.
ಕಾಂತಾರಾಜ ಮಹಾರಾಜ್ ಮಾತನಾಡಿ, ದೇಶ ಹಾಗೂ ವಿಶ್ವದಲ್ಲಿ ಅಶಾಂತಿ, ಅತೃಪ್ತಿ, ಅಸಹನೆ ನಿರಂತರವಾಗಿದೆ. ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಸಹಬಾಳ್ವೆ ನೆಲೆಸುವಂತೆ ಮಾಡಲು ಇಂತಹ ಯಜ್ಞ, ಜಪ ಪಾರಾಯಣಗಳನ್ನು ನಡೆಸಲಾಗುತ್ತಿದೆ. 2030 ರ ವರೆಗೂ ಕೋಟಿ ಯಜ್ಞ ಜಪ ಪಾರಾಯಣ ನಿರಂತರವಾಗಿ ನಡೆಯಲಿದೆ. ದೇವಾಲಯಗಳು ಸಮಸ್ತ ಜನಕೋಟಿಗೆ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವ ಪವಿತ್ರ ಕ್ಷೇತ್ರಗಳು ಎಂದು ಹೇಳಿದರು.
ದೇವಾಲಯ ಸಮಿತಿಯಿಂದ ಕಾಂತಾನಂದ ಮಹಾರಾಜ್ ಅವರ ಪಾದಪೂಜೆ ನೆರವೇರಿಸಲಾಯಿತು. ಕಣಿವೆ, ಹುಲುಸೆ ಗ್ರಾಮಗಳ ಭಕ್ತರಿಗೆ ಪ್ರಸಾದ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಕೋಟಿ ಯಜ್ಞ ಜಪ ಪಾರಾಯಣದಲ್ಲಿ ಹಿರಿಯೂರು ಸ್ವಾಮಿ ಬ್ರಹ್ಮಾನಂದ ಸ್ವಾಮೀಜಿ, ಸಮಿತಿಯ ಕಾರ್ಯಾಧ್ಯಕ್ಷ ಮಡಿಕೇರಿಯ ರಮೇಶ್ ಹೊಳ್ಳ, ಉಪಾಧ್ಯಕ್ಷ ಸಂಪತ್ ಕುಮಾರ್, ನಿರ್ದೇಶಕ ಬಿ.ಸಿ.ದಿನೇಶ್, ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ, ಮಂಜುನಾಥ್, ಲೋಕೇಶ್, ನವೀನ್, ಹುಲುಸೆ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎಸ್. ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.