ಮಡಿಕೇರಿ: ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮದ ಮೆರವಣಿಗೆ ನಡೆಯುವುದು ಬಹುಶಃ ಇದೇ ಕೊನೆಯ ವರ್ಷ. ಹಾಗಾಗಿ, ಜ. 30ರಂದು ಸರ್ವೋದಯ ದಿನದ ಅಂಗವಾಗಿ ನಡೆಯುವ ಗಾಂಧೀಜಿ ಅವರ ಚಿತಾಭಸ್ಮದ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮನವಿ ಮಾಡಿದರು.
ಇಡೀ ದೇಶದಲ್ಲೇ ಅಪರೂಪದ ಅವಕಾಶ ಕೊಡಗು ಜಿಲ್ಲೆಗೆ ಲಭಿಸಿತ್ತು. ಇಲ್ಲಿನ ಖಜಾನೆಯಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನು ತೆಗೆದಿರಿಸಲಾಗಿತ್ತು. ಪ್ರತಿ ವರ್ಷ ಜ. 30ರಂದು ಅವರ ಚಿತಾಭಸ್ಮದ ಮೆರವಣಿಗೆಯ ನಗರದಲ್ಲಿ ನಡೆಯುತ್ತಿತ್ತು. ಆದರೆ, ಈಗ ಸ್ಮಾರಕ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದೆ. ಮುಂದಿ ವರ್ಷದ ಹೊತ್ತಿಗೆ ಅದು ಪೂರ್ಣಗೊಳ್ಳಲಿದ್ದು, ಸ್ಮಾರಕದಲ್ಲಿ ಚಿತಾಭಸ್ಮ ಚಿರಸ್ಥಾಯಿಯಾಗಲಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಸ್ಮಾರಕ ನಿರ್ಮಾಣ ಕಾರ್ಯ ಮುಗಿದಿದೆ. ಆದರೆ, ಅದರ ಸುತ್ತಲೂ ಇರುವ ಜಾಗದಲ್ಲಿ ಉದ್ಯಾನ ನಿರ್ಮಿಸಬೇಕಿದೆ. ಅದಕ್ಕಾಗಿ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ, ಈ ವರ್ಷ ಚಿತಾಭಸ್ಮವನ್ನು ಸ್ಮಾರಕದಲ್ಲಿರಿಸುವುದಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಮೆರವಣಿಗೆ ಮಾಡಲಾಗುತ್ತದೆ ಎಂದರು.
ಪ್ರತಿ ವರ್ಷವೂ ಸರ್ವೋದಯ ಸಮಿತಿಯ ಜೊತೆಗೆ ಜಿಲ್ಲಾಡಳಿತವು ಸೇರಿ ಜಿಲ್ಲಾ ಖಜಾನೆಯಲ್ಲಿರಿಸಿರುವ ಗಾಂಧೀಜಿ ಅವರ ಚಿತಾಭಸ್ಮವನ್ನು ತೆಗೆದುಕೊಂಡು ಪುಷ್ಪಾಲಂಕಾರ ಮಾಡಿ, ವಿಶೇಷ ಗೌರವ ಸಲ್ಲಿಸಿ, ನಂತರ ಪೊಲೀಸ್ ಗೌರವದೊಂದಿಗೆ ಮೆರವಣಿಗೆ ಮೂಲಕ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಗಾಂಧಿ ಮಂಟಪಕ್ಕೆ ತೆರಳಿ ಅಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ. ಬಳಿಕ ಪೊಲೀಸ್ ಗೌರವ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.
ಯಾರ ಭಾಷಣವೂ ಇರದೇ ಕೇವಲ ಗಾಂಧಿ ಸಂಗೀತ, ಹಾಡಿಗಷ್ಟೇ ಮೀಸಲಾದ ಈ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದರು. ಈಗ ಚಿತಾಭಸ್ಮಕ್ಕೆಂದು ಸ್ಮಾರಕ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿರುವುದರಿಂದ ಮುಂದಿನ ವರ್ಷದ ಹೊತ್ತಿಗೆ ಚಿತಾಭಸ್ಮವನ್ನು ಶಾಶ್ವತವಾಗಿ ಸ್ಮಾರಕದಲ್ಲಿರಿಸಿ ಸಾರ್ವಜನಿಕರಿಗೆ ನಿತ್ಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಹೀಗಾಗಿ, ಈ ವರ್ಷ ನಡೆಯುವುದೇ ಬಹುಶಃ ಕೊನೆಯ ಚಿತಾಭಸ್ಮದ ಮೆರವಣಿಗೆ ಎಂದು ಜಿಲ್ಲಾಧಿಕಾರಿ ಫಲಪುಷ್ಪ ಪ್ರದರ್ಶನಕ್ಕೆಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭಾಗವಹಿಸಿದ್ದರು.
Quote - ಹುತಾತ್ಮರ ದಿನಾಚರಣೆಯಂದು ಸಂಜೆ ಗಾಂಧಿಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ತು ವತಿಯಿಂದ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ ಮುನೀರ್ ಅಹ್ಮದ್ ಸರ್ವೋದಯ ಸಮಿತಿಯ ಪ್ರಧಾನ ಕಾರ್ಯದರ್ಶಿ
Quote - ಗಾಂಧಿ ಮಂಟಪದ ಆವರಣದಲ್ಲಿ ಹುತಾತ್ಮರ ದಿನದಂದು ವಿದ್ಯಾರ್ಥಿಗಳಿಗೆ ಲಘು ಉಪಾಹಾರ ಹಾಗೂ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು ಅಂಬೆಕಲ್ಲು ನವೀನ್ ಸಮಿತಿ ಸದಸ್ಯ
ಸೈರನ್ ಮೊಳಗಿಸಿ ಪೊಲೀಸ್ ಬ್ಯಾಂಡ್ ನಿಯೋಜಿಸಿ ಜ. 30ರಂದು ನಡೆಯಲಿರುವ ಹುತಾತ್ಮರ ದಿನಾಚರಣೆ ಅಂಗವಾಗಿ ಮಡಿಕೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹಿಂದೆ ಮೊಳಗುತ್ತಿದ್ದ ಸೈರನ್ ಅನ್ನು ಮೊಳಗಿಸಬೇಕು ಪೊಲೀಸ್ ಬ್ಯಾಂಡ್ ನಿಯೋಜಿಸಬೇಕು ಎಂಬ ಒತ್ತಾಯಗಳು ಸರ್ವೋದಯ ಸಮಿತಿಯ ಸದಸ್ಯರಿಂದ ಕೇಳಿ ಬಂದವು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸರ್ವೋದಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ‘ಹಿಂದೆ ಹುತಾತ್ಮರ ದಿನಾಚರಣೆ ವೇಳೆ ಬೆಳಿಗ್ಗೆ 11 ಗಂಟೆಗೆ ಸೈರನ್ ಮೊಳಗಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಇದು ನಿಂತು ಹೋಗಿದೆ. ಈಗ ಮತ್ತೆ ಆ ಪರಿಪಾಠವನ್ನು ಆರಂಭಿಸಬೇಕು’ ಎಂದು ಮನವಿ ಮಾಡಿದರು. ಜೊತೆಗೆ ಗಾಂಧಿ ಮಂಟಪ ಆವರಣವನ್ನು ಸ್ವಚ್ಛಗೊಳಿಸಬೇಕು. ಪೊಲೀಸ್ ಬ್ಯಾಂಡ್ ನಿಯೋಜಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಸೈರನ್ ಅಳವಡಿಸುವ ಸಂಬಂಧ ಸರ್ವೋದಯ ಸಮಿತಿಯವರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ’ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಪ್ರತಿಕ್ರಿಯಿಸಿ ‘ಪೊಲೀಸ್ ಬ್ಯಾಂಡ್ ನಿಯೋಜಿಸಲಾಗುವುದು’ ಎಂದರು. ಸರ್ವೋದಯ ಸಮಿತಿ ಸದಸ್ಯ ತೆನ್ನಿರಾ ಮೈನಾ ಮಾತನಾಡಿ ‘ಹುತಾತ್ಮರ ದಿನಾಚರಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು. ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಸದಸ್ಯ ಚಂದ್ರಶೇಖರ್ ತಹಶೀಲ್ದಾರ್ ಪ್ರವೀಣ್ ಕುಮಾರ್ ಪದವ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಪೌರಾಯುಕ್ತ ಎಚ್.ಆರ್.ರಮೇಶ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಮನ್ವಯಾಧಿಕಾರಿ ದಮಯಂತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.