ADVERTISEMENT

ಯೋಧರನ್ನು ಬೆಂಬಲಿಸುವ ಮನಸ್ಥಿತಿ ಮೂಡಲಿ

ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಚೊಟ್ಟಕೊರಿಯಂಡ ಕೆ.ಬಾಲಕೃಷ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:26 IST
Last Updated 10 ಜೂನ್ 2025, 14:26 IST
ಗ್ರಾಮೋತ್ಥಾನ ಭಾರತ ಪ್ರಕಾಶನದಿಂದ ಹೊರ ತರಲಾಗಿರುವ ಸಾಹಿತಿ ಚಿ.ನಾ.ಸೋಮೇಶ್ ಅವರ ‘ಭಾರತ ಸಿಂಧೂರ’ ಕೃತಿಯನ್ನು ಮಡಿಕೇರಿಯಲ್ಲಿ ಮಂಗಳವಾರ ಬೆಂಗಳೂರಿನ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಚೊಟ್ಟಕೊರಿಯಂಡ ಕೆ.ಬಾಲಕೃಷ್ಣ ಲೋಕಾರ್ಪಣೆಗೊಳಿಸಿದರು
.
ಗ್ರಾಮೋತ್ಥಾನ ಭಾರತ ಪ್ರಕಾಶನದಿಂದ ಹೊರ ತರಲಾಗಿರುವ ಸಾಹಿತಿ ಚಿ.ನಾ.ಸೋಮೇಶ್ ಅವರ ‘ಭಾರತ ಸಿಂಧೂರ’ ಕೃತಿಯನ್ನು ಮಡಿಕೇರಿಯಲ್ಲಿ ಮಂಗಳವಾರ ಬೆಂಗಳೂರಿನ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಚೊಟ್ಟಕೊರಿಯಂಡ ಕೆ.ಬಾಲಕೃಷ್ಣ ಲೋಕಾರ್ಪಣೆಗೊಳಿಸಿದರು .   

ಮಡಿಕೇರಿ: ‘ಗಡಿಗಳನ್ನು ಕಾಯುವ ಯೋಧರನ್ನು ಸ್ಮರಿಸುವ ಮತ್ತು ಅವರನ್ನು ಬೆಂಬಲಿಸುವ ಮನಸ್ಥಿತಿಯನ್ನು ಹೊಂದುವುದು ಇಂದಿನ ಅಗತ್ಯವಾಗಿದೆ’ ಎಂದು ಬೆಂಗಳೂರಿನ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಚೊಟ್ಟಕೊರಿಯಂಡ ಕೆ.ಬಾಲಕೃಷ್ಣ ಪ್ರತಿಪಾದಿಸಿದರು.

ಗ್ರಾಮೋತ್ಥಾನ ಭಾರತ ಪ್ರಕಾಶನದಿಂದ ಹೊರ ತರಲಾಗಿರುವ ಸಾಹಿತಿ ಚಿ.ನಾ.ಸೋಮೇಶ್ ಅವರ ‘ಭಾರತ ಸಿಂಧೂರ’ ಕೃತಿಯನ್ನು ಇಲ್ಲಿ ಮಂಗಳವಾರ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಚಿ.ನಾ.ಸೋಮೇಶ್ ಅವರು ತಮ್ಮ ಕೃತಿಯಲ್ಲಿ ಹಲವು ದೇಶಭಕ್ತರ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಪುಸ್ತಕವನ್ನು ಯುವ ಸಮುದಾಯ ಓದಿ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ADVERTISEMENT

‘ನಾವೆಲ್ಲರೂ ಸೈನ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೆ, ಗಡಿಗಳನ್ನು ಕಾಯುವ ಯೋಧರನ್ನು ಸ್ಮರಿಸುವ ಮತ್ತು ಅವರನ್ನು ಬೆಂಬಲಿಸುವ ಮನಸ್ಥಿತಿಯನ್ನು ಹೊಂದಲೇಬೇಕಿದೆ’ ಎಂದು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ‘ಇಂದಿನ ಯುವಚೈತನ್ಯ ಮಾರ್ಗ ತಪ್ಪಿ ನಡೆಯುತ್ತಿದೆ. ಬೇಡದ ಮಾರ್ಗದಲ್ಲಿ ಹೋಗುತ್ತಾ ತಮಗೂ, ನಮ್ಮ ದೇಶಕ್ಕೂ ಅಪಾಯ ತಂದುಕೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಪ್ರಸಂಗ ಪ್ರಸ್ತಾಪಿಸಿದ ಅವರು, ‘ಐಪಿಎಲ್ ದೇಶಕ್ಕಿಂತ ದೊಡ್ಡದು ಎಂಬ ಹುಚ್ಚು ಭ್ರಮೆ ಬದಲಾಗಬೇಕು. ‘ಆಪರೇಷನ್ ಸಿಂಧೂರ’ದ ವಿಜಯೋತ್ಸವಕ್ಕೆ ಇಷ್ಟು ಸಂಖ್ಯೆಯಲ್ಲಿ ಯುವಜನರು ಬಂದಿದ್ದರಾ ಎಂದೂ ಪ್ರಶ್ನಿಸಿದರು.

ಯಾವ ನಾಡಿನಲ್ಲಿ ದೇಶಭಕ್ತರ ಸಂಖ್ಯೆ ಕುಸಿಯುತ್ತದೋ ಅಂತಹ ನೆಲದ ಸಂಸ್ಕೃತಿ ನಾಶವಾಗುತ್ತದೆ. ಮಾತ್ರವಲ್ಲ, ರಾಷ್ಟ್ರದ ಬಲ ಕುಸಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯರಾದ ರಾಜಲಕ್ಷ್ಮಿ ಗೋಪಾಲಕೃಷ್ಣ ಮಾತನಾಡಿ, ‘ಭಾರತ ಸಿಂಧೂರ ಕೃತಿಯು ಯುವ ಸಮೂಹಕ್ಕೆ ಸಂದೇಶವನ್ನು ನೀಡುವ ಉತ್ತಮ ಪುಸ್ತಕ. ಚಿ.ನಾ.ಸೋಮೇಶ್ ಅವರಿಂದ ಮತ್ತಷ್ಟು ಉತ್ತಮ ಪುಸ್ತಕಗಳು ಹೊರಬರಲಿ’ ಎಂದು ಹಾರೈಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಎಷ್ಟು ಬಾರಿ ಪಾಕಿಸ್ತಾನ ದಾಳಿ ನಡೆಸಿದರೂ ಅದು ನಮ್ಮ ಬಳಿಯೇ ಇರುತ್ತದೆ. ನಮ್ಮ ದೇಶದ ಭದ್ರತಾ ಪಡೆಗಳು ಶಕ್ತಿಯುತವಾಗಿವೆ. ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳಿವೆ’ ಎಂದರು.

ಕೃತಿ ರಚನೆಕಾರ ಚಿ.ನಾ.ಸೋಮೇಶ್, ದಂಡಿನ ಮಾರಿಯಮ್ಮ ದೇವಾಲಯದ ಪ್ರಧಾನ ಅರ್ಚಕರು ನಿವೃತ್ತ ಯೋಧ ಜಿ.ಎ.ಉಮೇಶ್, ಬೆಂಗಳೂರು ನಿವೃತ್ತ ಹೈಕೋರ್ಟ್ ಉದ್ಯೋಗಿ ಸುಧೀಂದ್ರ ಡಿ.ತಿಳಗುಳ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಉದ್ಯಮಿ ಹೀರಾಲಾಲ್ ಜಿ ಕೃಷ್ಣಾನಿ, ಆಕಾಶವಾಣಿಯ ಉದ್ಘೋಷಕಿ ವಿಶಾಲಾಕ್ಷಿ, ಸಾಮಾಜಿಕ ಕಾರ್ಯಕರ್ತ ಪವನ್‌ ಪೊನ್ನಯ್ಯ ಭಾಗವಹಿಸಿದ್ದರು.

ಪುಸ್ತಕದ ಹೆಸರು: ಭಾರತ ಸಿಂಧೂರ

ಲೇಖಕ: ಚಿ.ನಾ.ಸೋಮೇಶ್

ಪ್ರಕಾಶನ: ಗ್ರಾಮೋತ್ಥಾನ ಭಾರತ ಪ್ರಕಾಶನ

ಪುಟಗಳ ಸಂಖ್ಯೆ:156

ಬೆಲೆ: ₹200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.