ಸೋಮವಾರಪೇಟೆ: ‘ತಮ್ಮ ದುಡಿಮೆಯೊಂದಿಗೆ ಸಮಾಜ ಸೇವೆ ಮಾಡುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಾಣಬೇಕು’ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ ಅಭಿಪ್ರಾಯಪಟ್ಟರು.
ಇಲ್ಲಿನ ಲಯನ್ಸ್ ಕ್ಲಬ್ ಆಫ್ ಸೋಮವಾರಪೇಟೆಗೆ ಶುಕ್ರವಾರ ಅಧಿಕೃತ ಭೇಟಿ ನೀಡಿ ನಂತರ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.
‘ನಾವು ಯಾವುದೇ ಸೇವೆ ಮಾಡಿದರೂ, ಅದು ಕೇವಲ ಒಂದಿಬ್ಬರಿಗೆ ಮಾತ್ರ ಅನುಕೂಲವಾಗದೆ, ಇಡೀ ಸಮಾಜಕ್ಕೆ ಅದರ ಪ್ರಯೋಜನ ಸಿಗುವಂತಾದಲ್ಲಿ ಮಾತ್ರ ನಮ್ಮ ಸೇವೆಗೆ ಬೆಲೆ ಬರುತ್ತದೆ. ನಾವು ಸಮಾಜಕ್ಕೆ ಕೊಟ್ಟ ನೆರವು ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಕುಟುಂಬಕ್ಕೆ ಹಿಂದಿರುಗುತ್ತದೆ. ಅದು ಪ್ರಕೃತ್ತಿಯ ನಿಯಮವೂ ಆಗಿದೆ. ಆದ್ದರಿಂದ ಉಳ್ಳವರು ಸಮಾಜದಲ್ಲಿ ನೆರವು ಬಯಸುವವರಿಗೆ ಹೆಚ್ಚಿನ ಸಹಾಯ ಮಾಡಬೇಕಿದೆ. ಹುಟ್ಟು ಸಾವಿನ ನಡುವೆ ಜನರ ಮನದಲ್ಲಿ ಉಳಿಯುವಂತಹ ಒಂದೆರಡು ಉತ್ತಮ ಕೆಲಸ ಮಾಡಿದಲ್ಲಿ, ಮುಂದಿನ ಪೀಳಿಗೆ ನೆನೆಯುವಂತಾಗುತ್ತದೆ. ಸಂಘ ಸಂಸ್ಥೆಗಳ ಕೆಲಸವನ್ನು ಎಲ್ಲರೂ ಗೌರವಿಸುವ ಮೂಲಕ, ನೊಂದವರ ಬಾಳಿಗೆ ಬೆಳಕಾಗಬೇಕು'ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಎ.ಎಸ್.ಮಹೇಶ್ ವಹಿಸಿದ್ದರು. ಜಿಲ್ಲಾ ಖಜಾಂಚಿ ಕೆ.ಡಿ.ವೀರಪ್ಪ, ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್, ವಲಯಾಧ್ಯಕ್ಷ ರೋಹಿತ್, ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಸಿ.ಕೆ. ಶಿವಕುಮಾರ್, ಖಜಾಂಚಿ ವೀರಪ್ಪ ಹಾಗೂ ಲಿಯೋ ಅಧ್ಯಕ್ಷೆ ಪ್ರತೀಕ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.