ವಿರಾಜಪಪೇಟೆ: ಇಲ್ಲಿಗೆ ಸಮೀಪದ ಅರಮೇರಿಯ ಎಸ್.ಎಂ.ಎಸ್ ವಿದ್ಯಾಪೀಠದ ಶಾಲಾ ಮೈದಾನದಲ್ಲಿ ಬಾಳೆಕುಟ್ಟಿರ ಕುಟುಂಬದ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕೇರ್‌ಬಲಿ ನಮ್ಮೆಯಲ್ಲಿ ಕಾವಾಡಿಯ ಮಾಚಿಮಂಡ ಒಕ್ಕ ಚಾಂಪಿಯನ್ ಆಗಿ ಹೊರಹೊಮ್ಮಿತು. ₹ 50 ಸಾವಿರ ನಗದು ಹಾಗು ಟ್ರೋಫಿಯನ್ನು ಪಡೆದುಕೊಂಡಿತು.
ಕೇರ್ ಬಲಿ ನಮ್ಮೆಯಲ್ಲಿ ಒಟ್ಟು 282 ಒಕ್ಕಗಳು ಪಾಲ್ಗೊಂಡಿದ್ದರಿಂದ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೀರ್ ಅವರು ಬಾಳೆಕುಟ್ಟಿರ ಒಕ್ಕವನ್ನು ಕರ್ನಾಟಕ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಳಿಸಿದರು.
ಅಜ್ಜಮಾಡ ಒಕ್ಕ 2ನೇ ಸ್ಥಾನ ಪಡೆದು ₹ 40 ಸಾವಿರ ನಗದು ಹಾಗು ಟ್ರೋಫಿಯನ್ನು, ಚಿಯಕ್‌ಪೂವಂಡ ತಂಡ ತೃತೀಯ ಸ್ಥಾನ ಪಡೆದು ₹ 30 ಸಾವಿರ ನಗದು ಹಾಗೂ ಟ್ರೋಫಿ, ಚಂಗುಲಂಡ ತಂಡ 4ನೇ ಸ್ಥಾನ ಪಡೆದುಕೊಂಡು ₹ 20 ಸಾವಿರ ಟ್ರೋಫಿ ಪಡೆದುಕೊಂಡಿತು.
ಮಹಿಳೆಯ ವಿಭಾಗದಲ್ಲಿ ಕಾಂಡಂಡ ಒಕ್ಕವು ಪುದಿಯೊಕ್ಕಡ ಒಕ್ಕವನ್ನು ಮಣಿಸಿ ₹ 50 ಸಾವಿರ ನಗದು ಹಾಗು ಟ್ರೋಫಿಯನ್ನು, ಪುದಿಯೊಕ್ಕಡ ತಂಡಕ್ಕೆ ₹ 40 ಸಾವಿರ ನಗದು ಹಾಗೂ ಟ್ರೋಫಿ, ತೃತಿಯ ಸ್ಥಾನವನ್ನು ಐಚೇಟ್ಟಿರ ಒಕ್ಕ ಪಡೆದುಕೊಂಡು ₹ 30 ಸಾವಿರ ನಗದು ಹಾಗೂ ಟ್ರೋಫಿ, 4ನೇ ಸ್ಥಾನವನ್ನು ಕೊಚ್ಚೇರ ಒಕ್ಕ ₹ 20 ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.
ಟೂರ್ನಿಯ ವಿಕ್ಷಕ ವಿವರಣೆಯನ್ನು ಮಾಳೇಟಿರ ಶ್ರೀನಿವಾಸ್, ಬಾಳೆಯಡ ದಿವ್ಯಾ ಮಂದಪ್ಪ, ಮುಂಡಚಾಡಿರ ರೆನ್ನಿಭರತ್, ನಿರ್ವಹಿಸಿದರು.
ಟೂರ್ನಿಯ ನಿದೇರ್ಶಕರಾಗಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಉಪ ನಿರ್ದೇಶಕರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ತಾಂತ್ರಿಕ ನಿದೇರ್ಶಕರಾಗಿ ಕೊಣಿಯಂಡ ಮಂಜು ಮಾದಯ್ಯ, ತೀರ್ಪುಗಾರರಾಗಿ ಮುಂಡಚಾಡಿರ ಭರತ್, ಪೊನ್ನೊಲತಂಡ ಪ್ರತಿಕ್, ಉಳುವಂಗಡ ಲೋಹಿತ್ ಭೀಮಯ್ಯ, ಜಮ್ಮಡ ಗಿಲ್, ಪೊನ್ನೋಲತಂಡ ಆರ್ಯನ್, ಕೊಣಿಯಂಡ ದೀಕ್ಷಿತ್, ಬೇರೆರ ಬೆಳ್ಳಿಯಪ್ಪ ಕಾರ್ಯ ನಿರ್ವಹಿಸಿದರು.
ಕೇರ್‌ಬಲಿ ನಮ್ಮೆಯಲ್ಲಿ 158 ಪುರುಷರ ತಂಡ, 134 ಮಹಿಳೆಯರ ತಂಡವಾಗಿ ಒಟ್ಟು 282 ಕುಟುಂಬಗಳು ಪಾಲ್ಗೊಂಡಿದ್ದವು.
ಮುಂದಿನ ಬಾರಿ ಚಿಯಕಪೂವಂಡ ಒಕ್ಕ ಮುಂದಾಳತ್ವ ವಹಿಸಿಕೊಂಡಿದ್ದು ನಾಪೋಕ್ಲುವಿನಲ್ಲಿ ನಮ್ಮೆ ನಡೆಯಲಿದೆ. ಕೊಡವ ಟಗ್ ಆಫ್‌ವಾರ್ ಅಕಾಡಮಿಯಿಂದ ಬಾವುಟ ಪಡೆದುಕೊಳ್ಳುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
Highlights - ಕೇರ್‌ಬಲಿ ನಮ್ಮೆಯಲ್ಲಿ ಪಾಲ್ಗೊಂಡ ಒಟ್ಟು ಕುಟುಂಬ 282 158 ಪುರುಷರ ತಂಡ 134 ಮಹಿಳೆಯರ ತಂಡ
Cut-off box - ಗ್ರಾಮೀಣ ಪ್ರದೇಶದಲ್ಲಿ ಅಂತರರಾಷ್ಟ್ರೀಯ ನಿಯಮ ಪಾಲನೆ; ಶ್ಲಾಘನೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ‘ಬಾಳೆಕುಟ್ಟಿರ ಹಗ್ಗಜಗ್ಗಾಟ ನಮ್ಮೆಯಲ್ಲಿ 282 ಕುಟುಂಬಗಳು ಭಾಗವಹಿಸಿರುವುದು ಒಂದು ನಿದರ್ಶನ. ಗ್ರಾಮೀಣ ಪ್ರದೇಶದಲ್ಲಿ ನಡೆದಿರುವ ಕ್ರೀಡೆಗಳಿಗೆ ಅಂತರಾಷ್ಟ್ರೀಯ ನಿಯಮಗಳನ್ನು ಪಾಲಿಸಿರುವುದು ಪ್ರಶಂಸನೀಯವಾಗಿದೆ ಎಂದು ಶ್ಲಾಘಿಸಿದರು. ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ‘ಕ್ರೀಡೆಗಳನ್ನು ಉಳಿಸಿ ಬೆಳಸಿ ಮುಂದಿ ಪೀಳಿಗೆಗೆ ನೀಡಬೇಕು. ಭತ್ತದ ಚಟುವಟಿಕೆ ನಡೆಸಲು ಒತ್ತು ನೀಡಬೇಕು’ ಎಂದು ಹೇಳಿದರು.ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ ಬೋಪಯ್ಯ ಮಾತನಾಡಿ ‘ಕೌಟುಂಬಿಕ ಹಾಕಿ ಹಬ್ಬ 25ನೇ ವರ್ಷ ಪೂರೈಸಿದ್ದು ಪ್ರಪಂಚದ ಎಲ್ಲಾ ರೀತಿಯ ದಾಖಲೆಗಳನ್ನು ಪಡೆದಿಕೊಂಡಿರುವುದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಸಂದ ಕೀರ್ತಿ. ಹಗ್ಗಜಗ್ಗಾಟವು ಕೂಡ ಉತ್ತಮ ಬೆಳವಣಿಗೆಯಾಗಿದ್ದು ಸ್ಥಳೀಯ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮಯ ವಿಚಾರ. ದೇಶ ಇಂದು ಸಂದಿಗ್ಧತೆಯಲ್ಲಿ ಇದ್ದರು ಈ ಹಿಂದಿನ ಯುದ್ದದಲ್ಲಿ ಸ್ಕ್ವಾರ್ಡನ್ ಲೀಡರ್ ಅಜ್ಜಮಾಡ ದೇವಯ್ಯ ಅವರನ್ನು ನೆನೆಸಿಕೊಳ್ಳಬೇಕು. ಅವರು ಇಂದಿನ ಎಲ್ಲಾ ಸೈನಿಕರಿಗೆ ಸ್ಪೂರ್ತಿಯಾಗಲಿ’ ಎಂದು ಹೇಳಿದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ ‘ಕ್ರೀಡಾ ಗ್ರಾಮವನ್ನು ರಚಿಸಿದರೆ ಕ್ರೀಡೆ ಆಯೋಜಿಸುವವರಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಹೆಚ್ಚಿನ ಅನುಕೂವಾಗಲಿದ್ದು ಕ್ರೀಡಾಭಿಮಾನಿಗಳ ಸಂಖ್ಯೆ ಹೆಚ್ಚಳವಾಗಲಿದೆ’ ಎಂದು ಹೇಳಿದರು. ಬಾಳೆಕುಟ್ಟಿರ ಕುಟುಂಬದ ಅಧ್ಯಕ್ಷ ಮಂದಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ದೇವಣಗೇರಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಹಗ್ಗಾಜಗ್ಗಾಟ ಅಕಾಡೆಮಿ ಅಧ್ಯಕ್ಷ ಪೊನ್ನೊಳತಂಡ ಕಿರಣ್‌ಪೊನ್ನಪ್ಪ ಚಿಯಕ್‌ಪೂವಂಡ ಅಪ್ಪಚ್ಚು ಬಾಳೆಕುಟ್ಟಿರ ಅಯ್ಯಪ್ಪ ಸಮಾಜ ಸೇವಕ ಬಾಳೆಕುಟ್ಟಿರ ನಂಜಪ್ಪ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೀರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.