ಗೋಣಿಕೊಪ್ಪಲು: ರೈತರು ಹವಾಮಾನದೊಂದಿಗೆ ಗುದ್ದಾಡುವುದು ಸಹಜ , ಆದರೆ ಈಗ ಗದ್ದೆಯಲ್ಲಿರುವ ಫಸಲನ್ನು ಕಣಜ ಸೇರಿಸಬೇಕಿದ್ದರೆ ಕೂಲಿ ಕಾರ್ಮಿಕರು, ಯಂತ್ರ ಇತ್ಯಾದಿಗಳಿಗಾಗಿ ಪರದಾಡಬೇಕಿದೆ ಎಂಬುದು ಕಟುವಾಸ್ತವ.
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಭತ್ತ ಕೊಯ್ಲಿಗೆ ಬಂದು ಒಂದು ತಿಂಗಳಾಗಿದೆ. ಇದನ್ನು ಈಗಾಗಲೇ ಕೊಯ್ದು, ಒಕ್ಕಣೆ ಮಾಡಿ ಭತ್ತದ ಕೆಲಸವನ್ನು ಸಂಪೂರ್ಣವಾಗಿ ಮುಗಿಸಬೇಕಾಗಿತ್ತು. ಆದರೆ ಈ ಬಾರಿ ಇನ್ನೂ ಭತ್ತ ಗದ್ದೆಯಲ್ಲೇ ಒಣಗುತ್ತಿದೆ. ಬಹಳಷ್ಟು ಗದ್ದೆಗಳಲ್ಲಿ ಭತ್ತ ಬುಡಸಮೇತ ಒಣಗಿ ನೆಲಕ್ಕೆ ಬಿದ್ದು ಮಣ್ಣು ಸೇರುತ್ತಿದೆ. ಇದಕ್ಕೆ ಕಾರಣ ಕೊಯ್ಲು ಯಂತ್ರದ ಕೊರತೆ ಮತ್ತು ಕೂಲಿ ಕಾರ್ಮಕರ ಸಮಸ್ಯೆ.
ಕೊಡಗಿನಲ್ಲಿ ಭತ್ತದ ಕೊಯ್ಲು ಸಾಮಾನ್ಯವಾಗಿ ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಮುಗಿಯುತ್ತದೆ. ಈ ಅವಧಿಯಲ್ಲಿ ಕಟಾವು ಮುಗಿದರೆ ಬೆಳೆ, ಆದಾಯಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಫಸಲು ಹೆಚ್ಚು ಹಾಳಾಗದೆ ಕೈ ಸೇರುತ್ತದೆ. ಆದರೆ ಈ ಬಾರಿ ಡಿಸೆಂಬರ್ ಕೊನೆಯ ವಾರ ಬಂದರೂ ಭತ್ತದ ಕೊಯ್ಲು ಮುಗಿದಿಲ್ಲ. ಒಂದು ತಿಂಗಳ ಹಿಂದೆಯೇ ಕೊಯ್ಲು ಮಾಡಬೇಕಾದ ಭತ್ತ ಇನ್ನೂ ಕೂಡ ಗದ್ದೆಯಲ್ಲೇ ಹದಗೆಡುತ್ತಿದೆ.
ಭತ್ತದ ತೆನೆ ಬಾಗಿ ಮಣ್ಣಿಗೆ ಬಿದ್ದು ಹಾಳಾಗಿದೆ. ಮತ್ತೆ ಕೆಲವು ಗದ್ದೆಗಳಲ್ಲಿ ಭತ್ತ ನೀರಿಗೆ ಬಿದ್ದು ಮೊಳಕೆ ಒಡೆಯುವುತ್ತಿದೆ. ಇದನ್ನೆಲ್ಲ ನೋಡಿ ರೈತ ನೊಂದು, ನಷ್ಟ ಭರಿಸಲಾಗದೆ ಹತಾಶರಾಗಿದ್ದಾರೆ.
ಹವಾಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಸಮಸ್ಯೆ, ದುಬಾರಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಇವುಗಳ ವೆಚ್ಚವನ್ನೆಲ್ಲ ಸರಿದೂಗಿಸಿಕೊಂಡು ಕೃಷಿ ಮಾಡಿದ ರೈತನಿಗೆ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವುದೇ ದೊಡ ತಲೆ ನೋವಾಗಿದೆ.
‘ಪ್ರತಿ ವರ್ಷ ಭತ್ತ ಕೊಯ್ಲಿನ ವೇಳೆಗೆ ತಮಿಳು ನಾಡಿನಿಂದ ಹತ್ತಾರು ಯಂತ್ರಗಳು ಕೊಡಗಿಗೆ ಬರುತ್ತಿದ್ದವು. ಆದರೆ ಈ ಬಾರಿ ಯಂತ್ರಗಳು ಒಂದೆರಡು ಮಾತ್ರ ಬಂದಿವೆ ಎನ್ನುತ್ತಾರೆ ’ ಪೊನ್ನಂಪೇಟೆ ಮುಗಟಗೇರಿಯ ಕೃಷಿಕ ಐನಂಡ ಬೋಪಣ್ಣ.
‘ಯಂತ್ರಗಳ ಕೊರತೆಗೆ ಕಾರಣವೂ ಇದೆ. ಈ ಬಾರಿ ಉತ್ತಮ ಮಳೆ ಬಿದ್ದು ಬಯಲು ಸೀಮೆಗಳಲ್ಲಿ ಉತ್ತಮ ಬೆಳೆ ಬಂದಿದೆ. ಈ ಭಾಗಗಳಲ್ಲಿಯೂ ಕೂಡ ಕೃಷಿಕರು ಈಗ ಕಾರ್ಮಿಕರ ಕೊರತೆಯಿಂದ ಯಂತ್ರಗಳ ಮೊರೆ ಹೋಗಿದ್ದಾರೆ. ಯಂತ್ರಗಳೆಲ್ಲ ಬಯಲು ಸೀಮೆ ಕಡೆಗೆ ಹೋಗಿವೆ. ಕೊಡಗಿನಲ್ಲಿ ಕೊರತೆ ಎದುರಾಗಿದೆ’ ಎಂದು ಐನಂಡ ಬೋಪಣ್ಣ ಮಾಹಿತಿ ನೀಡಿದರು .
ಕೊಡಗಿನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಗದ್ದೆಗಳಿದ್ದರೂ ಕೃಷಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಅವರಿಗೂ ಕೂಡ ಯಂತ್ರಗಳ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿದ್ದು ಕೃಷಿಯ ಬಗ್ಗೆ ಬೇಸರ ಮೂಡಿಸಿದೆ. ಕಷ್ಟ ಪಟ್ಟು ಬೆಳೆದ ಬೆಳೆ ಸಕಾಲದಲ್ಲಿ ಮನೆ ಸೇರದೆ ಹಾಳಾಗುವುದನ್ನು ಕಂಡು ಕೊರಗುತ್ತಿದ್ದಾರೆ.
‘ಸರ್ಕಾರ ಭತ್ತ ಕೊಯ್ಲು ಯಂತ್ರಗಳನ್ನು ರೈತರಿಗೆ ಸಕಾಲದಲ್ಲಿ ಒದಗಿಸಿಕೊಟ್ಟು ಕೃಷಿಗೆ ಅನುಕೂಲ ಮಾಡಿಕೊಡಬೇಕು. ಕೃಷಿಕನ ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಇರುವ ಅಲ್ಲಸ್ವಲ್ಪ ಕೃಷಿಯೂ ಉಳಿಯದು ಎಂದು ಐನಂಡ ಬೋಪಣ್ಣ ಮತ್ತು ಐನಂಡ ತಮ್ಮಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.