ಸಿದ್ದಾಪುರ: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬೆಳೆಗಾರ ಕಕ್ಕುನೂರು ಪುರುಷೋತ್ತಮ ಅವರ ಅಂತ್ಯಕ್ರೀಯೆ ಕರಡಿಗೋಡು ಗ್ರಾಮದಲ್ಲಿ ಶನಿವಾರ ನಡೆಯಿತು.
ಕಾಫಿ ತೋಟದಲ್ಲಿ ಶುಕ್ರವಾರ ರಾತ್ರಿ ಕಾಡಾನೆ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾಜ್ಯ ವನ್ಯಜೀವಿ ಮಂಡಳಿಯ ಅಧ್ಯಕ್ಷ ಸಂಕೇತ್ ಪೂವಯ್ಯ ಭೇಟಿ ನೀಡಿದ್ದರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹ ಅಂತಿಮದರ್ಶನಕ್ಕೆ ಶನಿವಾರ ತಂಡೋಪತಂಡವಾಗಿ ಜನರು ಬಂದಿದ್ದರು.
ಮೃತರಿಗೆಪತ್ನಿ ಹಾಗೂ ಒಬ್ಬರು ಪುತ್ರಿ ಇದ್ದಾರೆ. ಪುರುಷೋತ್ತಮ ಅವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರ ಸಹೋದರ ಇದೇ ತೋಟದ ಸಮೀಪ ಕಾಡಾನೆ ದಾಳಿಯಲ್ಲಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಅಂತಿಮ ದರ್ಶನ: ಪುರುಷೋತ್ತಮ ಅವರ ಮನೆಗೆ ಶಾಸಕ ಎ.ಎಸ್ ಪೊನ್ನಣ್ಣ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ರೈತರು. ಕೃಷಿಕರು ಹಾಗೂ ಕಾರ್ಮಿಕರು ಕಾಡಾನೆಗಳು ಇರುವ ಪ್ರದೇಶ ಹಾಗೂ ಕಾಫಿ ತೋಟಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು. ಕಾಡಾನೆ ಹಾವಳಿ ತಡೆಗೆ ಹಲವು ಭಾಗದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಕಾಡಾನೆಗಳನ್ನು ಒಂದೆಡೆ ಸೇರಿಸಲು ‘ಸ್ಟಾಪ್ ಆಫ್ ಪಾರ್ಕ್’ ಯೋಜನೆ ಜಾರಿಗೊಳಿಸಿ ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದೆಂದು ಭರವಸೆಯನ್ನು ನೀಡಿದರು. ಕರಡಿಗೋಡು ಬಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಟ್ಟಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.
ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ.ಎಸ್.ಬಿ. ಪ್ರತ್ತೀಶ್, ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ.ಕೆ.ವಿ. ಶಿವರಾಂ, ಉಪ ವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ, ರಾಘವ ಸ್ಥಳದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.