ಮಡಿಕೇರಿ: ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ವತಿಯಿಂದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯಿಂದ ಹೊರಟ ಪ್ರತಿಭಟನಾಕಾರರು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಗಾಂಧಿ ಮೈದಾನ ತಲುಪಿದರು. ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದ ಅವರು, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮಾತನಾಡಿದ ಎಲ್ಲರೂ ಈ ಕಾಯ್ದೆಯನ್ನು ಜಾರಿಯಾಗಲು ಬಿಡಬಾರದು. ಮುಸ್ಲಿಮರೆಲ್ಲರೂ ಇನ್ನಷ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ‘ಹಿಂದಿನಿಂದಲೂ ವಕ್ಫ್ ಆಸ್ತಿ ಇದೆ. ಹಿಂದೂಗಳಿಂದ ಯಾವುದೇ ವಿರೋಧ ಇಲ್ಲ. ಆದರೆ, ಕೇಂದ್ರ ಸರ್ಕಾರ ಕೇವಲ ರಾಜಕೀಯಕ್ಕಾಗಿ ಈ ಕಾಯ್ದೆಯನ್ನು ತರಲು ಹೊರಟಿದೆ’ ಎಂದು ಆರೋಪಿಸಿದರು.
‘ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಒಗ್ಗಟ್ಟಾಗಿರುವಂತಹ ವಾತಾವರಣ ಸೃಷ್ಟಿಸಬೇಕು. ಇದು ಸಾಂಕೇತಿಕ ಹೋರಾಟ ಮಾತ್ರ. ಒಂದು ವೇಳೆ ನಮ್ಮ ವಿರೋಧವನ್ನು ಪರಿಗಣಿಸದೇ ಕಾಯ್ದೆ ಜಾರಿಗೊಳಿಸಿದ್ದೇ ಆದರೆ ಪುರುಷ ಮತ್ತು ಮಹಿಳೆಯರು ಸೇರಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮನವಿ ಪತ್ರ ಸ್ವೀಕರಿಸಿದರು. ಸ್ವೀಕರಿಸಿದ ನಂತರವೂ ಸಮಾವೇಶದಲ್ಲಿ ಮುಖಂಡರು ಮಾತನಾಡುತ್ತಿದ್ದರು. ಆದರೆ, ಪ್ರತಿಭಟನೆಗೆ ನೀಡಿದ್ದ ಕಾಲಾವಕಾಶ ಮುಗಿದಿದ್ದರಿಂದ ಸಭೆಯನ್ನು ಮೊಟಕುಗೊಳಿಸಲಾಯಿತು. ಧ್ವನಿವರ್ಧಕವನ್ನು ಸ್ಥಗಿತಗೊಳಿಸಿದ್ದರಿಂದ ಮಾತನಾಡುತ್ತಿದ್ದ ಅಮಿನ್ ಮೊಹಿಸಿನ್ ಆಕ್ರೋಶ ವ್ಯಕ್ತಪಡಿಸಿದರು. ನಂತರ, ಮತ್ತೆ ಧ್ವನಿವರ್ಧಕವನ್ನು ಸಂಪರ್ಕಿಸಲಾಯಿತು.
ಮುಖಂಡರಾದ ಪಿ.ಎಂ.ಲತೀಫ್, ಹಮೀದ್ ಮೌಲವಿ, ಮಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ಹಫೀಸ್ ಹಾಜಿ, ಉಮ್ಮರ್ ಫೈಜಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡೆವು; ಎಂ.ಲಕ್ಷ್ಮಣ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಯಾಗಲು ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು. ‘ಈಗಾಗಲೇ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಈ ಕಾಯ್ದೆಯ ವಿರುದ್ಧ ಹೇಳಿಕೆ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಯೂ ಹೇಳಿಕೆ ನೀಡುವಂತೆ ನಾವು ಒತ್ತಾಯಿಸಬೇಕು. ಮಾತ್ರವಲ್ಲ ಈ ಪ್ರತಿಭಟನೆಯ ಧ್ವನಿ ದೆಹಲಿಯನ್ನು ಮುಟ್ಟಬೇಕು’ ಎಂದು ಹೇಳಿದರು.
ಮುಂದೆ ಇನ್ನಷ್ಟು ತೀವ್ರ ಹೋರಾಟ ನಡೆಸಬೇಕು; ಅಮಿನ್ ಮೊಹಿಸಿನ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ ‘ಮುಂದೆ ಇನ್ನಷ್ಟು ದೊಡ್ಡ ಪ್ರಮಾಣದ ಹೋರಾಟ ನಡೆಸಬೇಕು’ ಎಂದು ಹೇಳಿದರು. ‘ವಕ್ಫ್ ಸ್ವತ್ತನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಅದು ನಮ್ಮ ಬೆವರಾಗಬೇಕು. ಕಾಯ್ದೆ ಜಾರಿಗೊಳಿಸುವ ಕನಸನ್ನು ಸರ್ಕಾರ ಬಿಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.