ADVERTISEMENT

ಬದುಕಿನ ಪಯಣ ಮುಗಿಸಿದ ಮೆಬಿನಾ

‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಷೋ ವಿಜೇತೆ, ಮಾಡೆಲಿಂಗ್‌ ಕ್ಷೇತ್ರದಲ್ಲೂ ಮಿಂಚು

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:35 IST
Last Updated 27 ಮೇ 2020, 17:35 IST
ಸುಂಟಿಕೊಪ್ಪದಲ್ಲಿ ಕಳೆದ ವರ್ಷ ನಡೆದಿದ್ದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್‌ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯವನ್ನು ಮೆಬಿನಾ ಮೈಕಲ್ ಉದ್ಘಾಟಿಸಿದ್ದರು (ಸಂಗ್ರಹ ಚಿತ್ರ)
ಸುಂಟಿಕೊಪ್ಪದಲ್ಲಿ ಕಳೆದ ವರ್ಷ ನಡೆದಿದ್ದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್‌ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯವನ್ನು ಮೆಬಿನಾ ಮೈಕಲ್ ಉದ್ಘಾಟಿಸಿದ್ದರು (ಸಂಗ್ರಹ ಚಿತ್ರ)   

ಮಡಿಕೇರಿ: ಮಾಡೆಲಿಂಗ್‌, ರಿಯಾಲಿಟಿ ಷೋ, ಸಿನಿಮಾ... ಹೀಗೆ ಹಲವು ಕ್ಷೇತ್ರದಲ್ಲಿ ಪುಟ್ಟಪುಟ್ಟ ಹೆಜ್ಜೆಯಿಡುತ್ತಾ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದ ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಷೋ ವಿಜೇತೆ, ರೂಪದರ್ಶಿ ಮೆಬಿನಾ ಮೈಕಲ್‌ (23) ಅವರು ಬಹುಬೇಗ ಬದುಕಿಗೆ ವಿದಾಯ ಹೇಳಿದ್ದಾರೆ. ಮಂಡ್ಯ ಸಮೀಪದ ಬೆಳ್ಳೂರು ಕ್ರಾಸ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.

ಮೆಬಿನಾ ಮೈಕಲ್‌ ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮದ ದಿವಂಗತ ಮೈಕಲ್ ಅವರ ಪುತ್ರಿ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಐಗೂರಿನ ಅಜ್ಜಿ ಮನೆಗೆ ಕಾರಿನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ.

ಆಕೆಯ ತಂದೆ ಮೈಕಲ್‌ ಅವರಿಗೆ ದೊಡ್ಡಬಳ್ಳಾಪುರದಲ್ಲಿ ಉದ್ಯೋಗ ದೊರಕಿದ ಕಾರಣಕ್ಕೆ ಬಹಳ ವರ್ಷಗಳ ಹಿಂದೆಯೇ ಕುಟುಂಬಸ್ಥರೂ ಅಲ್ಲಿಯೇ ನೆಲೆಸಿದ್ದರು. ಅವರ ತಂದೆಯು ಅಕಾಲಿಕವಾಗಿ ನಿಧನರಾದ ಮೇಲೆ ಸಹೋದರನಿಗೆ ಆ ಕೆಲಸ (ಚಾಲಕ) ದೊರಕಿತ್ತು. ತಾಯಿ ಬೆನ್ಸಿ ಅವರೊಂದಿಗೆ ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದ ಮೆಬಿನಾ ಮೈಕಲ್‌, ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಷೋದ 4ನೇ ಆವೃತ್ತಿಯಲ್ಲಿ ಪಾಲ್ಗೊಂಡು ವಿಜೇತರಾಗಿದ್ದರು.

ADVERTISEMENT

‘ಮೆಬಿನಾ ತಾಯಿ ಬೆನ್ಸಿ ಅವರ ಊರು ಸುಂಟಿಕೊಪ್ಪ. ಅಲ್ಲಿಗೂ ಮೆಬಿನಾ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚುತ್ತಿದ್ದರು. ಖಾಸಗಿ ವಾಹಿನಿಯ ರಿಯಾಲಿಟಿ ಷೋನಲ್ಲಿ ಜಯಗಳಿಸಿದ್ದು, ಆಕೆಯ ಬದುಕಿಗೆ ತಿರುವು ನೀಡಿತ್ತು. ಕಳೆದ ವರ್ಷ ಸುಂಟಿಕೊಪ್ಪದಲ್ಲಿ ನಡೆದ ಮಕ್ಕಳ ದಿನಾಚರಣೆಗೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಮೆಬಿನಾ ಅವರನ್ನು ಸನ್ಮಾನಿಸಲಾಗಿತ್ತು. ಪ್ರತಿಭಾನ್ವಿತ ಹುಡುಗಿ ಇಷ್ಟು ಬೇಗ ಬದುಕಿಗೆ ವಿದಾಯ ಹೇಳಿಬಿಟ್ಟಳು’ ಎಂದು ಕುಟುಂಬದ ಆತ್ಮೀಯರಾದ ವಿನ್ಸೆಂಟ್‌ ಕಣ್ಣೀರು ಹಾಕಿದರು.

‘ತಮಿಳು ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಮೆಬಿನಾಗೆ ಸಿಕ್ಕಿತ್ತು. ಲಾಕ್‌ಡೌನ್‌ಗೂ ಮೊದಲು 15 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡು ದೊಡ್ಡಬಳ್ಳಾಪುರಕ್ಕೆ ವಾಪಾಸ್ಸಾಗಿದ್ದರು. ಕನ್ನಡದ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದರು. ಮೆಬಿನಾ ಗ್ರಾಮೀಣ ಪ್ರತಿಭೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಆಕೆಗೆ ಭವಿಷ್ಯವಿತ್ತು. ಆದರೆ, ಸಾಧನೆಗೂ ಮೊದಲೇ ಇಹಲೋಕ ತ್ಯಜಿಸಿಬಿಟ್ಟಳು’ ಎಂದು ಕುಶಾಲನಗರದ ಕಿರುಚಿತ್ರದ ನಿರ್ದೇಶಕ ಪ್ರಭುದೇವ್‌ ಹೇಳಿದರು.

ಸೋಮವಾರಪೇಟೆ ಸಮೀಪದ ನಗರೂರಿನ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ಬುಧವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.

ಸುಂಟಿಕೊಪ್ಪಕ್ಕೂ ನಂಟು
ಸುಂಟಿಕೊಪ್ಪ:
ಮೆಬಿನಾ ಮೈಕಲ್ ಅವರಿಗೂ ಸುಂಟಿಕೊಪ್ಪಕ್ಕೂ ನಿಕಟ ಸಂಬಂಧವಿತ್ತು.

ಮೆಬಿನಾ ಅವರ ಸೋದರ ಮಾವ, ತಾಯಿಯ ಸಹೋದರ ಜಾನ್‌ ಅವರ ಮನೆ ಸುಂಟಿಕೊಪ್ಪದ ಆಸ್ಪತ್ರೆಯ ರಸ್ತೆಯಲ್ಲಿದ್ದು, ಇಲ್ಲಿಗೆ ಆಕೆ ಅನೇಕ ಬಾರಿ ಬಂದು ಹೋಗಿದ್ದಾರೆ.

2018ರ ನ.14ರಂದು ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ 1986-87ನೇ ಸಾಲಿನ ಏಳನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮೆಬಿನಾ ಅವರನ್ನು ಸನ್ಮಾನಿಸಲಾಗಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ಸುಂಟಿಕೊಪ್ಪ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಉಪ್ಪಳ ಮತ್ತು ಮೈಸೂರು ತಂಡಗಳ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಉದ್ಘಾಟನೆಯನ್ನು ನೆರವೇರಿಸಿದ್ದರು.

ಮೆಬಿನಾ ಚಿಕ್ಕವಳಿದ್ದಾಗ ಸುಂಟಿಕೊಪ್ಪಕ್ಕೆ ಬರುತ್ತಿದ್ದಳು. ಇಲ್ಲಿನ ಬೀದಿಗಳಲ್ಲಿ ಆಟವಾಡುತ್ತಿದ್ದಳು.

‘ಸರ್ವೋತೋಮುಖ’, ‘ಡ್ಯಾಡಿ’ ಸೇರಿದಂತೆ ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಮೆಬಿನಾಗೆ ಅರಸಿ ಬಂದಿದ್ದವು. ಆದರೆ, ಅಕಾಲಿಕವಾಗಿ ಅಸುನೀಗಿರುವುದು ದುಃಖದ ಸಂಗತಿ ಎಂದು ಸೋದರ ಮಾವ ಜಾನ್ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.