ADVERTISEMENT

‘ಪ್ರತಾ‍ಪ್‌ ಸಿಂಹಗೆ ಸ್ಪರ್ಧಿಸುವ ಹಕ್ಕಿಲ್ಲ’

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:24 IST
Last Updated 16 ಮಾರ್ಚ್ 2019, 14:24 IST
   

ಮಡಿಕೇರಿ: ‘ಸಂಸದ ಪ್ರತಾಪ ಸಿಂಹ ಅವರು ತಮ್ಮ 5 ವರ್ಷದ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಹೀಗಾಗಿ, ಈ ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನೈತಿಕ ಹಕ್ಕು ಅವರಿಗೆ ಇಲ್ಲ’ ಎಂದು ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಲು ಪ್ರತಾಪ ಸಿಂಹ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಸಂಸದರ ಹೆಸರಿನಲ್ಲಿ ಕಾನೂನು ಭಕ್ಷಕರಾಗಿ ಮೆರೆದವರು, ಹನುಮಾನ್‌ ಜಯಂತಿ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡು ದರ್ಪ ತೋರುವವರನ್ನು ಚುನಾವಣೆಯಲ್ಲಿಗೆಲ್ಲಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ‘ಜಾತ್ಯತೀತರಿಗೆ ಮತ ನೀಡಿ' ಎಂಬ ಅಭಿಯಾನ ನಡೆಸಲಾಗುವುದು. ಈ ಹಿನ್ನೆಲೆ ರಾಜ್ಯದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು. ‘ಮೋದಿ ಹೋದ್ರೆ ಎಲ್ಲವೂ ಸಾಧ್ಯ’ ಘೋಷ ವಾಕ್ಯದೊಂದಿಗೆ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ದೇಶದಲ್ಲಿ ಕಪ್ಪು ಹಣ ನಿರ್ಮೂಲನೆ ಆಗಿಲ್ಲ. ನಿರುದ್ಯೋಗ ಸಮಸ್ಯೆ ಏರುತ್ತಿದೆ. ಇದೀಗ ಹುತಾತ್ಮರ ಬಲಿದಾನವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಜತೆಗೆ, ಯುದ್ಧದ ಭೀತಿ, ಮತೀಯ ಗಲಭೆಗಳು ನಡೆಯುತ್ತಿರುವುದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ಎಂದು ಪುಟ್ಟಸಿದ್ದಶೆಟ್ಟಿ ದೂರಿದರು.

ಕೊಡಗು ಮಳೆಹಾನಿ ಸಂತ್ರಸ್ತರಿಗೆಪೂರ್ಣ ಪರಿಹಾರ ಇನ್ನೂ ಸಿಕ್ಕಿಲ್ಲ. ಪುನರ್ವಸತಿ ಕಾರ್ಯಗಳತ್ತ ಪ್ರತಾಪ್ ಸಿಂಹ ಕೊಡುಗೆ ಏನೂ ಇಲ್ಲ ಎಂದು ಆಪಾದಿಸಿದರು.

ಇನ್ನು ದಿಡ್ಡಳ್ಳಿ ಪುನರ್ವಸತಿ, ಗ್ರಾಮೀಣ ರಸ್ತೆಗಳ ಬಗ್ಗೆ ತಲೆಕೆಡಸಿಕೊಳ್ಳದ ಪ್ರಸಾಪ್‌ ಸಿಂಹ ಅವರಿಗೆ ಮತ ಹಾಕಲು ಯೋಚನೆ ಮಾಡಬೇಕಿದೆ. ಕೊಡಗಿನ ಮತದಾರರು ಜಾಗೃತರಾಗಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷ ನಟರಾಜು, ಪದಾಧಿಕಾರಿಗಳಾದ ಕುಮಾರ್ ಶೆಟ್ಟಿ, ಎ. ಚೆಲುವರಾಜು, ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.