ADVERTISEMENT

ರೂಪೇಶ್‌ ಕರೆ ತರಲು ಭಾರೀ ಭದ್ರತೆ

ಕೊಡಗಿನಲ್ಲೂ ನಕ್ಸಲ್‌ ಚಟುವಟಿಕೆ ನಡೆಸಿದ್ದ ಆರೋಪ, ಏ.10ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:07 IST
Last Updated 19 ಮಾರ್ಚ್ 2019, 12:07 IST
ಮಡಿಕೇರಿಯಲ್ಲಿರುವ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯಕ್ಕೆ ನಕ್ಸಲ್‌ ನಾಯಕ ರೂಪೇಶ್‌ನನ್ನು ಮಂಗಳವಾರ ಪೊಲೀಸ್‌ ಭದ್ರತೆಯಲ್ಲಿ ಹಾಜರು ಪಡಿಸಲಾಯಿತು
ಮಡಿಕೇರಿಯಲ್ಲಿರುವ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯಕ್ಕೆ ನಕ್ಸಲ್‌ ನಾಯಕ ರೂಪೇಶ್‌ನನ್ನು ಮಂಗಳವಾರ ಪೊಲೀಸ್‌ ಭದ್ರತೆಯಲ್ಲಿ ಹಾಜರು ಪಡಿಸಲಾಯಿತು   

ಮಡಿಕೇರಿ: ಕೊಡಗು ಜಿಲ್ಲೆ ಹಾಗೂ ರಾಜ್ಯದ ಗಡಿಭಾಗದಲ್ಲಿ ನಕ್ಸಲ್‌ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಕೆಲವು ವರ್ಷಗಳ ಹಿಂದೆ ಬಂಧಿತನಾಗಿರುವನಕ್ಸಲ್‌ ನಾಯಕರೂಪೇಶ್‌ನನ್ನು ಮಂಗಳವಾರ ಭಾರೀ ಭದ್ರತೆಯಲ್ಲಿ ಕರೆತಂದು ಇಲ್ಲಿನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಸೋಮವಾರ ಸಂಜೆ ಕೇರಳದ ಜೈಲಿನಿಂದ ಕೇರಳ ಹಾಗೂ ಕೊಡಗು ಜಿಲ್ಲೆಯನಕ್ಸಲ್‌ ನಿಗ್ರಹ ‍ಪಡೆಯ ಭದ್ರತೆಯಲ್ಲಿ ಕರೆತಂದು ಸಮೀಪದ ಕರ್ಣಂಗೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ನ್ಯಾಯಾಲಯದ ಆವರಣಕ್ಕೆ ಕರೆ ತರಲಾಯಿತು. ಆಗ ರೂಪೇಶ್‌ ನಕ್ಸಲ್‌ ಪರವಾಗಿ ಘೋಷಣೆ ಕೂಗಿದ. ಕಳೆದ ವಾರ ಕೇರಳದ ವಯನಾಡು ಜಿಲ್ಲೆಯಲ್ಲಿ ಪೊಲೀಸ್‌ ಹಾಗೂ ನಕ್ಸಲರ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಜಲೀಲ್‌ ಮೃತಟ್ಟಿದ್ದ. ಜಲೀಲ್‌ ಪರವಾಗಿಯೂ ರೂಪೇಶ್‌ ಘೋಷಣೆ ಕೂಗಿದ.

ಹೇಳಿಕೆ ಪಡೆದ ನ್ಯಾಯಾಧೀಶ ವೀರಭದ್ರಪ್ಪ ವಿ. ಮಲ್ಲಾಪುರೆ ಅವರು ವಿಚಾರಣೆಯಲ್ಲಿ ಏ. 10ಕ್ಕೆ ಮುಂದೂಡಿದರು. ಬಳಿಕ ಕೇರಳದ ಕಣ್ಣೂರಿಗೆ ಕೊರೆದೊಯ್ಯಲಾಯಿತು. ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಕಳೆದ 15 ದಿನಗಳಿಂದ ಈಚೆಗೆ ಮತ್ತೆ ನಕ್ಸಲ್‌ ಚಟುವಟಿಕೆ ಆತಂಕವಿದ್ದು, ಭಾರೀ ಭದ್ರತೆ ಒದಗಿಸಲಾಗಿತ್ತು. ಬರುವ ಹಾಗೂ ಹೊರಗೆ ಹೋಗುವ ದಾರಿಯಲ್ಲಿ ಎಎನ್‌ಎಫ್‌ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದರು.

ADVERTISEMENT

ರೂಪೇಶ್‌ ಮೇಲೆ ಯಾವೆಲ್ಲಾ ಆರೋಪ?: ಜಿಲ್ಲೆಯ ಕಾಲೂರು, ಬಿರುನಾಣಿ ಸಮೀಪದ ಪರಕಟಗೇರಿ (2010) ಹಾಗೂ ಭಾಗಮಂಡಲ ಸಮೀಪದ ಚೇರಂಬಾಣೆಯಲ್ಲಿ (2013)ರೂಪೇಶ್‌ ನೇತೃತ್ವದ ಶಂಕಿತ ನಕ್ಸಲ್‌ ತಂಡವು ಪ್ರತ್ಯಕ್ಷವಾಗಿತ್ತು ಎಂಬ ಆರೋಪವಿದೆ.

ಗಡಿಭಾಗದ ಕೆಲವು ಮನೆಗಳಿಗೂ ಈ ತಂಡವು ಭೇಟಿ ನೀಡಿ ಆಹಾರ ಪದಾರ್ಥ ಸಂಗ್ರಹ ಮಾಡಿ ಹಾಗೂನಕ್ಸಲ್‌ ಪರವಾದ ಕರಪತ್ರ ಹಂಚಿಕೆ ಮಾಡಿದ್ದ ಆರೋಪವಿತ್ತು. ಈ ಸಂಬಂಧ ಶ್ರೀಮಂಗಲ ಹಾಗೂ ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲೂ ನಕ್ಸಲ್‌ ಚಟುವಟಿಕೆ ನಡೆಸಿದ್ದ ಆರೋಪದ ಮೇಲೆ ಇಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಎಲ್ಲಿ ಬಂಧನ?: ಆಂಧ್ರಪ್ರದೇಶ ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೊಯಮತ್ತೂರಿನಲ್ಲಿ ಕೆಲವು ವರ್ಷಗಳ ಹಿಂದೆ ರೂಪೇಶ್‌ನನ್ನು ಬಂಧಿಸಲಾಗಿತ್ತು. 2015ರಲ್ಲಿ ಕೊಡಗು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.