ADVERTISEMENT

ಕಲೆ, ಸಾಹಿತ್ಯದತ್ತ ಒಲವು ಹೆಚ್ಚಲಿ: ಡಾ.ವಸುಂಧರಾ ಭೂಪತಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 11:57 IST
Last Updated 2 ಫೆಬ್ರುವರಿ 2019, 11:57 IST
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಕವಿಗೋಷ್ಠಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಚಾಲನೆ ನೀಡಿದರು 
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಕವಿಗೋಷ್ಠಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಚಾಲನೆ ನೀಡಿದರು    

ಮಡಿಕೇರಿ: ‘ವಿದ್ಯಾರ್ಥಿ ಜೀವನದಲ್ಲೇ ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಥಮ ಯುವ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈಚಿನ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ ಯುವ ಜನಾಂಗದಲ್ಲಿ ಕ್ಷೀಣಿಸಿದೆ. ಕೇವಲ ಪಠ್ಯ ಪುಸ್ತಕ ಓದಿ ಹೆಚ್ಚು ಅಂಕ ಗಳಿಸುವತ್ತ ಆಸಕ್ತಿ ಹೊಂದಿದ್ದಾರೆಯೇ ಹೊರತು, ಕಲೆ, ಸಾಹಿತ್ಯ, ಸಾಮಾಜಿಕ ಚಿಂತನೆಯತ್ತ ಹೆಚ್ಚು ಒಲವು ಮೂಡಿಸುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ವಿದ್ಯಾರ್ಥಿಗಳು ಕಥೆ, ಕವನ, ಕಾದಂಬರಿಯ ಜತೆಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕನಿಷ್ಠ ತಿಂಗಳಿಗೊಂದು ಹೊಸ ಪುಸ್ತಕವನ್ನು ಮಾರುಕಟ್ಟೆಯಿಂದ ಕೊಂಡು ಓದಬೇಕು ಎಂದು ಸಲಹೆ ಮಾಡಿದರು.

ರಾಜ್ಯದ ಸಾಕಷ್ಟು ಕಾಲೇಜುಗಳ ಗ್ರಂಥಾಲಯಕ್ಕೆ ಪ್ರಾಧಿಕಾರದ ವತಿಯಿಂದ ₹ 10 ಸಾವಿರದಿಂದ ₹ 15 ಸಾವಿರದವರೆಗಿನ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ‘ಒಂದು ಕುಟುಂಬ ಅಥವಾ ಸಮಾಜ ಅಭಿವೃದ್ಧಿ ಆಗಬೇಕಾದರೆ ಮಹಿಳೆಯರ ಜಾಣ್ಮೆ ಹಾಗೂ ಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಟಿ.ವಿ ಹಾಗೂ ಮೊಬೈಲ್‌ಗಳಿಂತ ಹೆಚ್ಚು ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸಿನ ದುಃಖ, ದುಮ್ಮಾನಗಳನ್ನು ದೂರ ಮಾಡಬಹುದು. ಹಾಗೆಯೇ, ಜ್ಞಾನವನ್ನೂ ಬೆಳೆಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.

ಸಾಹಿತಿ ಸಂಗೀತಾ ರವಿರಾಜ್ ಮಾತನಾಡಿ, ‘ಪುಸ್ತಕ ಓದುವುದರಿಂದ ಆತ್ಮಸ್ಥೈರ್ಯ, ನೆಮ್ಮದಿ ಸಿಗುತ್ತದೆ. ಕವಿತೆ, ಕವನಗಳನ್ನು ಸಣ್ಣ ಪ್ರಮಾಣದಲ್ಲಿ ರಚಿಸಿ ಪತ್ರಿಕೆಗಳಲ್ಲಿ ಪ್ರಕಟಗೊಳಿಸಲು ಯುವಕರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಾದ ಎಂ.ಎಂ.ಐಶ್ವರ್ಯಾ, ಕೆ.ಎಲ್.ತುಂಗಾ, ಎಂ.ಮುಬೀನಾ, ಎಂ.ರೇಖಾ, ಎಂ.ಎನ್.ಲತಾ, ಸಿ.ಜೆ.ಭವ್ಯಾ, ರೇಷ್ಮಾ ಚುಟುಕು ಕವನ ವಾಚಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಜೆನ್ನಿಫರ್ ಲೋಲಿಟ, ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೋರನ ಸರಸ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.