ADVERTISEMENT

ಕೊಡಗಿನಲ್ಲಿ ಭೂಕೂಸಿತ: ಹಾರಂಗಿ ಜಲಾಶಯ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2019, 12:40 IST
Last Updated 18 ಮೇ 2019, 12:40 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ತುರ್ತಾಗಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಸಿ.ಎನ್.ಸಿ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್‌ ಅವರಿಗೆ ಮನವಿ ಸಲ್ಲಿಸಿದರು 
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ತುರ್ತಾಗಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಸಿ.ಎನ್.ಸಿ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್‌ ಅವರಿಗೆ ಮನವಿ ಸಲ್ಲಿಸಿದರು    

ಮಡಿಕೇರಿ: 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೂಕೂಸಿತಕ್ಕೆ ಹಾರಂಗಿ ಜಲಾಶಯವೇ ಪ್ರಮುಖ ಕಾರಣ. ಹಾರಂಗಿ ಜಲಾಶಯವನ್ನು ತುರ್ತಾಗಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್‌ ಕೌನ್ಸಿಲ್‌ (ಸಿಎನ್‌ಸಿ) ಸದಸ್ಯರು ಶನಿವಾರ ಜಿಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್‌.ಯು. ನಾಚಪ್ಪ ಮಾತನಾಡಿ, ಕಳೆದ 50 ವರ್ಷಗಳಿಂದ ಗರಿಷ್ಠ ಪ್ರಮಾಣದ ನೀರನ್ನು ಹಾರಂಗಿ ಅಣೆಕಟ್ಟೆಯಲ್ಲಿ ಶೇಖರಿಸಿದಟ ಕಾರಣ ಹಿನ್ನೀರಿನಿಂದ ಭೂಗರ್ಭ ಬಿರುಕು ಬಿಟ್ಟಿದೆ. ಆದ್ದರಿಂದಲೇ ಸಾಕಷ್ಟು ಅನಾಹುತ ಸಂಭವಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ನೈಸರ್ಗಿಕ ವಿಪತ್ತು ಮತ್ತು ದುರಂತಕ್ಕೆ ಮೂಲ ಕಾರಣವಾದ ಹಾರಂಗಿ ಜಲಾಶಯವನ್ನು ತೆರವು ಮಾಡಬೇಕು. ವಾಸ್ತವವಾಗಿ ಮುಂಗಾರುವಿನಲ್ಲಿ ಹಾರಂಗಿ ಜಲಾಶಯದಲ್ಲಿ ಮಿತಿಮೀರಿದ ನೀರು ಶೇಖರಣೆಯಾದಾಗ ಆ ನೀರನ್ನು ನದಿಯ ಕೆಳಭಾಗಕ್ಕೆ ಕ್ರಸ್ಟ್‌ಗೇಟ್‌ ಮೂಲಕ ಹರಿಯಬಿಡಬೇಕು. ಹಾಗೆ ಮಾಡದೇ ಮೀತಿಮೀರಿದ ನೀರು ಶೇಖರಣೆಯಿಂದ ಅದರ ಭಾರ ತಾಳಲಾರದೆ ಹಿನ್ನೀರಿನ ಹೊಡೆತದಿಂದ ಎಲ್ಲೆಡೆ ವಿಕೋಪ ಸಂಭವಿಸಿದೆ ಎಂದು ಹೇಳಿದರು.

ADVERTISEMENT

ಸಿಎನ್‌ಸಿ ಪದಾಧಿಕಾರಿಗಳಾದ ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಬೇಪಾಡಿಯಂಡ ದಿನು, ಚಂಬಂಡ ಜನತ್, ಕಾಟುಮಣಿಯಂಡ ಉಮೇಶ್, ನಂದಿನೆರವಂಡ ವಿಜು, ಪುದಿಯೊಕ್ಕಡ ಕಾಶಿ, ಅರೆಯಡ ಗಿರೀಶ್, ಪುಲ್ಲೇರ ಕಾಳಪ್ಪ, ಮಣವಟ್ಟೀರ ಸ್ವರೂಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.