ADVERTISEMENT

ಹಿರಿಯ ನಾಗರಿಕರಿಗೆ ಹಲವು ಸೌಲಭ್ಯ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುತಿನ ಚೀಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 13:53 IST
Last Updated 1 ಜನವರಿ 2019, 13:53 IST
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಗುರುತಿನ ಚೀಟಿ ವಿತರಿಸಿದರು
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಗುರುತಿನ ಚೀಟಿ ವಿತರಿಸಿದರು   

ಮಡಿಕೇರಿ: ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಮಂಗಳವಾರ ವಿತರಿಸಿದರು.

ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಈ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಈ ಹಿಂದೆ ಜಿಲ್ಲೆಯಲ್ಲಿ 18,621 ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿತ್ತು. ಇತ್ತೀಚೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಹೊಸ ಮಾದರಿ ಗುರುತಿನ ಚೀಟಿ ನೀಡಲಾಗುತ್ತಿದೆ.

ಈ ಗುರುತಿನ ಚೀಟಿಯು ವಿಮಾನ, ರೈಲು, ಬಸ್, ಆದಾಯ ಪ್ರಮಾಣಪತ್ರ, ಪಿಂಚಣಿ... ಹೀಗೆ ಹಲವು ರಿಯಾಯಿತಿ ಸೌಲಭ್ಯಗಳನ್ನು ಪಡೆಯಲು ಬಳಸಬಹುದು ಎಂದು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ದೇವರಾಜು ಹೇಳಿದರು.

ADVERTISEMENT

ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ಗುರುತಿಸಲ್ಪಟ್ಟ 5 ಸ್ವಯಂ ಸೇವಾ ಸಂಸ್ಥೆಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳ ಮೂಲಕ 60 ವರ್ಷ ಮೇಲ್ಪಟ್ಟ ಎಲ್ಲ ಪುರುಷ ಮತ್ತು ಮಹಿಳಾ ಹಿರಿಯ ನಾಗರಿಕರ ಮಾಹಿತಿ ಪಡೆದು ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ₹50 ಶುಲ್ಕ ನಿಗದಿಪಡಿಸಲಾಗಿದೆ.‌ ಗ್ರಾಮಾಂತರ ಪ್ರದೇಶದಲ್ಲಿನ ವೃದ್ಧರಿಗೆ ಆರೋಗ್ಯ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಒದಗಿಸಲು ಅನುಕೂಲ ಆಗುವಂತೆ ನುರಿತ ವೈದ್ಯರನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆ, ಆಸ್ಪತ್ರೆಗಳಿಗೆ ಸಹಾಯಧನ ನೀಡಲಾಗುತ್ತದೆ ಎಂರು.

ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.