ADVERTISEMENT

ಯೋಧರ ನಾಡಿನಲ್ಲಿ ಹುತಾತ್ಮರಿಗೆ ನಮನ

ದಾಳಿಗೆ ಖಂಡನೆ, ಉಗ್ರರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 13:23 IST
Last Updated 15 ಫೆಬ್ರುವರಿ 2019, 13:23 IST
ಹುತಾತ್ಮರಾದ ಯೋಧರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಹುತಾತ್ಮರಾದ ಯೋಧರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಮಡಿಕೇರಿ: ಕಾಶ್ಮೀರದ ಅವಂತಿಪೋರಾದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು, ಮಾಜಿ ಯೋಧರು ಹಾಗೂ ಸಂಘ– ಸಂಸ್ಥೆಗಳು ಖಂಡಿಸಿವೆ.

ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅದೇ ಆವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ದೇಶಭಕ್ತಿ ಗೀತೆ ಹಾಡಲಾಯಿತು.

ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ ಮಾತನಾಡಿ, ‘ಹುತಾತ್ಮರಾದ ಯೋಧರು ಮತ್ತೆ ಹುಟ್ಟಿಬಂದು ದೇಶಸೇವೆ ಮಾಡಲಿ; ಹುತಾತ್ಮರಾದ ಯೋಧರ ಕುಟುಂಬಕ್ಕೆ ಎಲ್ಲರೂ ನೆರವಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ ಮಾತನಾಡಿ, ‘ಯೋಧರ ಮೇಲಿನ ದಾಳಿ ಹೇಡಿತನದ ಕೃತ್ಯ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ಸೂಕ್ತವಾದ ನಿರ್ಧಾರಕ್ಕೆ ಬರಲಿದ್ದಾರೆ. ಮತ್ತೊಮ್ಮೆ ಇಂತಹ ಕೃತ್ಯ ನಡೆಯಂತೆ ಕ್ರಮ ಆಗಬೇಕು’ ಎಂದು ಹೇಳಿದರು.

‘ಒಂದು ವಾರದ ಹಿಂದೆಯೇ ದಾಳಿ ಎಚ್ಚರಿಕೆ ಬಂದಿತ್ತು. ಆದರೆ, ದುರದೃಷ್ಟವಶಾತ್‌ ಇಂತಹ ಕೃತ್ಯ ನಡೆದಿದೆ. ಎಲ್ಲೋ ಒಂದು ಕಡೆ ಹಿನ್ನಡೆಯಾಗಿದೆ’ ಎಂದು ವಿಷಾದಿಸಿದರು.

‘ನೆರವು ನೀಡಿ’: ಹುತಾತ್ಮರಾದ ಯೋಧರ ಕುಟುಂಬಕ್ಕೆ ಆರ್ಥಿಕ ಬಲ ತುಂಬುವುದು ಎಲ್ಲರ ಕರ್ತವ್ಯ. ಕೊಡಗು ಸೇರಿ ರಾಜ್ಯದ ಸಾರ್ವಜನಿಕರು ನೆರವಾಗಲಿ’ ಎಂದು ಕಾರ್ಯಪ್ಪ ಕೋರಿದರು.

ನಿವೃತ್ತ ಯೋಧ ದೇವಯ್ಯ ಅವರು ಕೃತ್ಯ ನೆನೆದು ಕಣ್ಣೀರು ಸುರಿಸಿದರು. ‘ಶ್ರೀನಗರ ಹತ್ತಿರವಾಗಿದ್ದರೆ ಈಗಲೇ ಅಲ್ಲಿಗೆ ಹೋಗುತ್ತಿದ್ದೆ’ ಎಂದು ಹೇಳಿದರು.

ಪರ್ತಕರ್ತ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯಾ ಅಬ್ರಾರ್‌, ನಗರಸಭೆ ಸದಸ್ಯರಾದ ಕೆ.ಜಿ.ಪೀಟರ್‌, ಲಯನ್ಸ್‌ ಕ್ಲಬ್‌ನ ದಾಮೋದರ್, ತನ್ನೀರಾ ಮೈನಾ, ಜಯಾ ಚಿಣ್ಣಪ್ಪ, ಅನಿತಾ ಪೂವಯ್ಯ, ಚಿದ್ವಿಲಾಸ್, ಅಬ್ದುಲ್‌ ರಜಾಕ್‌, ಮೋಂತಿ ಗಣೇಶ್‌, ಚೆಯ್ಯಂಡ ಸತ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.