ADVERTISEMENT

ಕೇಂದ್ರದ ಯೋಜನೆ ಲಾಭ ಕೊಡಗಿಗೆ ಸಿಕ್ಕಿಲ್ಲ: ವಿ.ಪಿ.ಶಶಿಧರ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:34 IST
Last Updated 1 ಏಪ್ರಿಲ್ 2019, 14:34 IST
ವಿ.ಪಿ. ಶಶಿಧರ್‌
ವಿ.ಪಿ. ಶಶಿಧರ್‌   

ಮಡಿಕೇರಿ: ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಲಾಭ ಕೊಡಗಿನ ಜನರಿಗೆ ಸಿಕ್ಕಿಲ್ಲ. ಮೋದಿ ಮುಖವಾಡ ಇಟ್ಟುಕೊಂಡು ಪೊಳ್ಳು ಭರವಸೆಗಳನ್ನಷ್ಟೇ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿ.ಪಿ.ಶಶಿಧರ್ ಟೀಕಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮತಯಾಚನೆಯ ಸಂದರ್ಭದಲ್ಲಿ ಜಿಲ್ಲೆಯ ಜನರನ್ನು ಪ್ರಧಾನಿ ನರೇಂದ್ರ ಮೋದಿಯ ವ್ಯಸನಕ್ಕೆ ಈಡು ಮಾಡಿ ಪ್ರತಾಪ ಸಿಂಹ ಚುನಾವಣೆ ಗೆಲ್ಲಲು ಹುನ್ನಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಲೋಕಸಭೆ ಚುನಾವಣೆಯಲ್ಲಿ ಪ್ರತಾಪ ಸಿಂಹ ಈ ಬಾರಿ ಸೋಲುತ್ತಾರೆ. ಇದೇ ಸೋಲಿನ ಭೀತಿಯಿಂದ ವಾಸ್ತವಕ್ಕೆ ದೂರವಾದ ಸುಳ್ಳು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಅರ್ಥ ಮಾಡಿಸಲು ಬಂದಿದ್ದಾರೆ. ಜಿಲ್ಲೆಯ ಜನರು ಸಿಂಹಗೆ ತಕ್ಕಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ನನ್ನ ಹೆಗಲಿಗೆ ಬಿಡಿ ಎಂದಿದ್ದ ಸಿಂಹ ಕರಡು ಅಧಿಸೂಚನೆ ಪ್ರಕಟವಾದ ನಂತರವೂ ಮೌನ ವಹಿಸಿದ್ದಾರೆ’ ಎಂದು ಹೇಳಿದರು.

ಕೇಂದ್ರದ ಸಂಬಾರು ಮಂಡಳಿ ಸದಸ್ಯರಾಗಿದ್ದುಕೊಂಡು ವಿಯೆಟ್ನಾಂನ ಕಾಳುಮೆಣಸನ್ನು ಭಾರತಕ್ಕೆ ರಫ್ತು ಮಾಡಿಕೊಳ್ಳುತ್ತಿದ್ದಾರೆ. ಇದ್ದರಿಂದ ಕಾಳುಮೆಣಸಿನ ದರ ತೀವ್ರ ಕುಸಿದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.

ಹಿಂದಿನ ಸಂಸದರು ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡುತ್ತಿದ್ದರು. ಆದರೆ, ಸಿಂಹರಿಗೆ ಗ್ರಾಮ ಪಂಚಾಯಿತಿಯ ದಾರಿಯೇ ತಿಳಿದಿಲ್ಲ. ಕೊಡಗು ಸ್ಮಶಾನದಂತಹ ವಾತಾವರಣದಲ್ಲಿದ್ದು, ಹೆಣಕ್ಕೆ ಹೆಗಲು ನೀಡಲು ಸಿಂಹ ಇಲ್ಲಿಗೆ ಬರುತ್ತಾರೆ ಎಂದು ನಾವು ಭಾವಿಸಬೇಕಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಗೋಣಿಕೊಪ್ಪಲಿಗೆ ಭೇಟಿ ನೀಡಿದ ಸ್ಮೃತಿ ಇರಾನಿ, ಐಟಿ ದಾಳಿಗೆ ಒಳಗಾದವರ ಪರ ಮೈತ್ರಿ ಪಕ್ಷ ಪ್ರತಿಭಟನೆ ನಡೆಸುತ್ತದೆ ಎಂದು ಆರೋಪಿಸಿದ್ದಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖೆ ನಡೆದಾಗ ಬಿಜೆಪಿ ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಮೈತ್ರಿ ಪಕ್ಷವನ್ನು ದೂರಲು ನೈತಿಕತೆ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಚಾಲಕ ತೆನ್ನೀರ ಮೈನಾ, ಷಂಶುದ್ದೀನ್, ಪ್ರಕಾಶ್ ಆಚಾರ್ಯ, ಸೆಬಾಸ್ಟಿನ್, ಅಬ್ದುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.