ADVERTISEMENT

ಹೊಸ ಬಸ್‌ ನಿಲ್ದಾಣ ಕಾರ್ಯಾರಂಭಕ್ಕೆ ಸೂಚನೆ

ನಗರ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ತೆರವು: ಕಾವೇರಮ್ಮ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:19 IST
Last Updated 18 ಡಿಸೆಂಬರ್ 2018, 12:19 IST
ನೂತನ ಖಾಸಗಿ ಬಸ್‌ ನಿಲ್ದಾಣ – ಪ್ರಜಾವಾಣಿ ಚಿತ್ರ
ನೂತನ ಖಾಸಗಿ ಬಸ್‌ ನಿಲ್ದಾಣ – ಪ್ರಜಾವಾಣಿ ಚಿತ್ರ   

ಮಡಿಕೇರಿ: ‘ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಬಸ್‌ಗಳೂ ಹೊಸ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಹೊಸ ಬಸ್ ನಿಲ್ದಾಣ ಉದ್ಘಾಟನೆಯಾಗಿ 9 ತಿಂಗಳಾಗಿದೆ. ಇನ್ನೂ ಸ್ಥಳಾಂತರಗೊಂಡಿಲ್ಲ. ಇಲ್ಲಿಗೆ ಬೇಕಾದ ಮೂಲ ಸೌಲಭ್ಯಗಳು ಲಭ್ಯ ಆಗಿವೆ. ಹೆಚ್ಚು ದಿನ ಮುಂದೂಡಿಕೊಂಡು ಹೋಗುವುದು ಸರಿಯಲ್ಲ. ಎಲ್ಲರ ಹಿತದೃಷ್ಟಿಯಿಂದ ತಕ್ಷಣ ಗಮನಹರಿಸಬೇಕಿದೆ ಎಂದು ಶ್ರೀವಿದ್ಯಾ ಹೇಳಿದರು.

ಸಂಚಾರ ಮಾರ್ಗ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸುವ ಕಾರ್ಯ ನಗರಸಭೆಯಿಂದ ಆಗಬೇಕು. ನಗರಸಭೆ, ಪೊಲೀಸ್, ಕಂದಾಯ, ಆರ್‌ಟಿಒ, ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ 3 ದಿನದೊಳಗೆ ವರದಿ ನೀಡಿ ಎಂದು ಸೂಚಿಸಿದರು.

ADVERTISEMENT

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ತೆರವುಗೊಳಿಸಲಾಗುವುದು. ಖಾಸಗಿ ಬಸ್‌ಗಳನ್ನು ಹೊಸ ನಿಲ್ದಾಣಕ್ಕೆ ಸ್ಥಳಾಂತರ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ ಜೋಯಪ್ಪ ಮಾತನಾಡಿ, ರಾಜಾಸೀಟು ಮಾರ್ಗದಲ್ಲಿ ಬಸ್‌ಗಳು ಸಂಚರಿಸುವುದರಿಂದ ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಲಿದೆ. ಹಾಗೆಯೇ ರಾಜಾಸೀಟಿಗೆ ಆಗಮಿಸುವ ಪ್ರವಾಸಿಗರಿಗೂ ಕಿರಿಕಿರಿ ಉಂಟಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಮಂಗೇರಿರ ಮುತ್ತಣ್ಣ ವೃತ್ತದಿಂದ ಹೊಸ ಖಾಸಗಿ ಬಸ್ ನಿಲ್ದಾಣದವರೆಗೆ ಏಕಮುಖ ಸಂಚಾರ ಮಾಡುವುದರಿಂದ ಸ್ಥಳೀಯರು ನಗರ ಸುತ್ತಿ ಬಳಸಿಕೊಂಡು ಬರಲು ಸಾಧ್ಯವಿಲ್ಲ. ಆದ್ದರಿಂದ ದ್ವಿಮುಖ ಸಂಚಾರಬೇಕಿದೆ ಎಂದು ತಿಳಿಸಿದರು.

ಒತ್ತುವರಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಎರಡು ಬದಿ ತೆರವುಗೊಳಿಸಬೇಕು. ಅದನ್ನು ಬಿಟ್ಟು ಒಂದು ಕಡೆ ಮಾತ್ರ ತೆರವುಗೊಳಿಸುವುದಕ್ಕೆ ಆಕ್ಷೇಪವಿದೆ ಎಂದು ಪ್ರಕಾಶ್ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಏಕಮುಖ ಸಂಚಾರ ಮಾಡಿ ನೋಡೋಣ, ಜನರ ಸ್ಪಂದನೆ ಬಸ್‌ಗಳ ಸಂಚಾರ ಮತ್ತಿತರವನ್ನು ಗಮನಿಸಿ, ನಂತರದ ದಿನಗಳಲ್ಲಿ ಬದಲಾವಣೆ ಮಾಡಬಹುದು ಎಂದು ಸಲಹೆ ಮಾಡಿದರು.

ನಗರಸಭೆಯ ಜೂನಿಯರ್ ಎಂಜಿನಿಯರ್ ವನಿತಾ ಮಾತನಾಡಿ, ಖಾಸಗಿ ಹೊಸ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಕಾಮಗಾರಿಗಳು ಆಗಿವೆ. ಮಳೆ ಎರಚಲು ನೀರು ತಡೆಯಲು ರೂಫಿಂಗ್ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನೀಕೃಷ್ಣ, ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಜನಾರ್ದನ ಪ್ರಭು, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಪೌರಾಯುಕ್ತ ಎಂ.ಎಲ್. ರಮೇಶ್, ನಾಗರಾಜು, ಸಿಪಿಐ ಅನೂಪ್ ಮಾದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.