ಮಡಿಕೇರಿ: ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಉತ್ತಮವಾಗಿದ್ದರೂ ಮಡಿಕೇರಿಯಂತಹ ನಗರಕ್ಕೆ ಹೊಂದುವಂತಿಲ್ಲ. ರಾಜ್ಯ, ದೇಶ ಮಾತ್ರವಲ್ಲ ಪ್ರಪಂಚದ ಪ್ರಮುಖ ಪ್ರವಾಸಿ ಸ್ಥಳ ಎನಿಸಿದ ಮಂಜಿನ ನಗರಿಗೆ ಇರುವ ಬಸ್‌ನಿಲ್ದಾಣವನ್ನು ನೋಡಿದರೆ ಒಂದು ತಾಲ್ಲೂಕು ಬಸ್‌ನಿಲ್ದಾಣ ನೋಡಿದಂತಾಗುತ್ತದೆ ಎಂಬುದು ಬಹುಜನರ ಅಭಿಪ್ರಾಯ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಳಿದ ಜಿಲ್ಲೆಗಳಿಗಿಂತ ಹೆಚ್ಚಿನ ಮಹತ್ವ ಪಡೆದಿರುವ ಮಡಿಕೇರಿಯಲ್ಲಿನ ಬಸ್‌ನಿಲ್ದಾಣವನ್ನು ನೋಡಿದರೆ ಹೊರ ಜಿಲ್ಲೆಗಳಿಂದ ಬಂದವರಿಗೆ ತಾಲ್ಲೂಕು ಕೇಂದ್ರದ ಬಸ್‌ನಿಲ್ದಾಣ ನೋಡಿದಂತಹ ಅನುಭವವಾಗುತ್ತದೆ. ಹೊಸದಾಗಿ ಬಂದ ಬಹಳಷ್ಟು ಜನರು ದೊಡ್ಡ ಬಸ್‌ನಿಲ್ದಾಣ ಎಲ್ಲಿದೆ ಎಂದು ಕೇಳಿರುವ ಪ್ರಸಂಗಗಳೂ ಸಾಕಷ್ಟಿವೆ.
ಜಾಗತಿಕ ಮನ್ನಣೆ ಪಡೆದ ಮಡಿಕೇರಿ ನಗರದಲ್ಲಿ ಸಾಲು ಸಾಲು ಕೊರತೆಗಳಿದ್ದು, ಅವುಗಳಲ್ಲಿ ಹೈಟೆಕ್ ಬಸ್‌ನಿಲ್ದಾಣ ಇಲ್ಲದೇ ಇರುವುದೂ ಒಂದು ದೊಡ್ಡ ಕೊರತೆ ಎನಿಸಿದೆ. ಈಗ ಇರುವ ಬಸ್‌ನಿಲ್ದಾಣ ಬಸ್ ನಿಲ್ಲುವುದಕ್ಕೆ, ಪ್ರಯಾಣಿಕರು ಕೂರುವುದಕ್ಕೆ, ಬಸ್ ಹತ್ತುವುದಕ್ಕೆ ತಕ್ಕಷ್ಟು ಉತ್ತಮವಾದ ಸೌಲಭ್ಯ ಹೊಂದಿದೆ. ಆದರೆ, ಮಡಿಕೇರಿಯಂತಹ ಪ್ರವಾಸಿ ಸ್ಥಳದಲ್ಲಿ ಇದಕ್ಕಿಂತಲೂ ಉತ್ತಮವಾದ ಹೈಟೆಕ್ ವ್ಯವಸ್ಥೆಗಳುಳ್ಳ ಬಸ್‌ನಿಲ್ದಾಣದ ಅಗತ್ಯತೆ ಇದೆ ಎಂಬುದು ಇಲ್ಲಿಗೆ ಬಂದ ಬಹುತೇಕರ ಅಭಿಪ್ರಾಯ.
ಇಲ್ಲಿಗೆ ಒಂದು ಟಿವಿ ಬಂದು, ಅದರಲ್ಲಿ ಬಸ್‌ಗಳ ವೇಳಾಪಟ್ಟಿ ಪ್ರಕಟಿಸುವ ಮತ್ತು ಅದನ್ನು ಆಡಿಯೊ ರೂಪದಲ್ಲಿ ಕೇಳಿಸುವ ವ್ಯವಸ್ಥೆ ಆರಂಭವಾಗಿದೆ. ಇದು ತಕ್ಕಮಟ್ಟಿಗೆ ನಡೆಯುತ್ತಿದೆ.
ಪ್ರಯಾಣಿಕರು ಕುಳಿತುಕೊಳ್ಳಲು ಹೆಚ್ಚಿನ ಆಸನಗಳ ವ್ಯವಸ್ಥೆ ಇಲ್ಲ. ಇರುವ ಕೆಲವೇ ಕೆಲವು ಆಸನಗಳು ಭರ್ತಿಯಾದರೆ ಉಳಿದ ಜನರು ನಿಂತುಕೊಂಡು ಬಸ್ ಬರುವಿಕೆಗೆ ಕಾಯಬೇಕಿದೆ. ಇರುವ ಆಸನಗಳೂ ಹೈಟೆಕ್ ಆಸನಗಳಲ್ಲ. ಮಹಿಳೆಯರಿಗಾಗಿ ಒಂದು ನಿರೀಕ್ಷಣಾ ಕೊಠಡಿಯೂ ಇಲ್ಲಿಲ್ಲ. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸುವಂತಹ ಸೂಕ್ತ ಕೊಠಡಿಗಳಿಲ್ಲ. ಹೀಗೇ, ಹೇಳುತ್ತಾ ಹೋದರೆ ಸಾಲು ಸಾಲು ಕೊರತೆಗಳೇ ಕಾಣಿಸುತ್ತವೆ.
ವಾಹನ ನಿಲುಗಡೆ ಸೌಲಭ್ಯವೂ ಪ್ರಯಾಣಿಕರಿಗೆ ತಕ್ಕಷ್ಟು ಇಲ್ಲ. ದ್ವಿಚಕ್ರ ವಾಹನ ಸವಾರರಿಗೆ ಒಂದಿಷ್ಟು ಜಾಗ ಮುಂಭಾಗದಲ್ಲಿದೆ. ಹೆಚ್ಚಿನ ಕಾರುಗಳಿಗಂತೂ ಇಲ್ಲಿ ಅವಕಾಶವೇ ಇಲ್ಲ. ಬಸ್‌ನಿಲ್ದಾಣ ನಿರ್ಮಿಸುವಾಗಲೇ ನೆಲಮಾಳಿಗೆಯಲ್ಲಿ ಸೂಕ್ತವಾದ ಸುಸಜ್ಜಿತವಾದ ವಾಹನ ನಿಲುಗಡೆ ತಾಣ ನಿರ್ಮಿಸಬೇಕಿತ್ತು. ಈಗ ವಾಹನಗಳಲ್ಲಿ ಬಂದವರು ದೂರದ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಬಂದು ಬಸ್ ಹತ್ತುವ ಸ್ಥಿತಿ ಇದೆ.
ವಿಶಾಲವಾದ ಮತ್ತೊಂದು ಜಾಗ ಸಿಕ್ಕರೆ ಅಲ್ಲಿ ಒಂದು ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸಿ, ಹಾಲಿ ಇರುವ ಬಸ್‌ನಿಲ್ದಾಣವನ್ನು ಗ್ರಾಮಾಂತರ ಬಸ್‌ನಿಲ್ದಾಣವನ್ನಾಗಿಯೂ ಅಥವ ನಗರ ಬಸ್‌ನಿಲ್ದಾಣವನ್ನಾಗಿಯೂ ಪರಿಗಣಿಸಲೂ ಅವಕಾಶ ಇದೆ. ಆದರೆ ಇದಕ್ಕೆಲ್ಲ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಅಗತ್ಯ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಸದ್ಯ, ಇರುವ ಬಸ್‌ನಿಲ್ದಾಣ 2021ರಲ್ಲಿ ದುರಸ್ಥಿಯಾಗಿದೆ. ಈ ಬಸ್‌ನಿಲ್ದಾಣದಲ್ಲೆ ಕನಿಷ್ಠ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಿ ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.
ಬಿಕೊ ಎನ್ನುವ ಖಾಸಗಿ ಬಸ್ ನಿಲ್ದಾಣ: ಕೊಡಗು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯಂತೆ ಖಾಸಗಿ ಬಸ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಕೆಎಸ್‌ಆರ್‌ಟಿಸಿಯಷ್ಟೇ ಮಹತ್ವವನ್ನು ಖಾಸಗಿ ಬಸ್‌ಗಳೂ ಪಡೆದಿವೆ. ಆದರೆ, ಖಾಸಗಿ ಬಸ್ ನಿಲ್ದಾಣ ಮಾತ್ರ ಜನರಿಲ್ಲದೇ ಬಿಕೊ ಎನ್ನುತ್ತಿರುತ್ತದೆ. ಎಲ್ಲ ಪ್ರಯಾಣಿಕರೂ ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲೆ ಬಸ್ ಹತ್ತುತ್ತಾರೆ.
ಜನರು ಹೆಚ್ಚು ಓಡಾಡುವ ಸ್ಥಳಗಳಿಗಿಂತ ದೂರದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿರುವುದು ಇದಕ್ಕೆ ಮುಖ್ಯ ಕಾರಣ. ಇಲ್ಲಿ ಇಂದಿರಾ ಕ್ಯಾಂಟೀನ್ ಸಹ ಇದ್ದರೂ, ಜನರು ಇದರತ್ತ ಬರುತ್ತಿಲ್ಲ. ಖಾಸಗಿ ಬಸ್‌ಗಳಲ್ಲಿ ಬರುವವರು ಬಹುಪಾಲು ಮಂದಿ ಹಳ್ಳಿಗಳಿಂದ ಬರುವವರು, ಲೈನ್‌ಮನೆ ಕಾರ್ಮಿಕರು, ತೋಟದಲ್ಲಿ ಕೆಲಸ ಮಾಡುವವರು. ಇವರು ಪ್ರತಿ ಶುಕ್ರವಾರ ಸಂತೆ ಮಾರುಕಟ್ಟೆಗೆ ಬರುತ್ತಾರೆ. ಸಂತೆಯಲ್ಲಿ ಖರೀದಿ ಪ್ರಕ್ರಿಯೆ ಮುಗಿಸಿ ಹತ್ತಿರದಲ್ಲೇ ಇರುವ ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲ್ಲುತ್ತಾರೆ. ಉಳಿದ ದಿನಗಳಂದು ಅವರು ಕಾಲೇಜು ರಸ್ತೆ, ಮಹದೇವಪೇಟೆಯಲ್ಲಿ ಖರೀದಿ ಮಾಡಿ ಇದೇ ಜಾಗಕ್ಕೆ ಬರುತ್ತಾರೆ. ಹಾಗಾಗಿ, ಇಲ್ಲಿಂದ ದೂರದಲ್ಲಿ ನಿರ್ಮಿಸಿರುವ ಹಳೆಯ ಖಾಸಗಿ ಬಸ್‌ನಿಲ್ದಾಣ ಪ‍್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ಕುಡಿಯುವ ನೀರೇ ಇಲ್ಲ!: ಹೆಚ್ಚಿನ ಪ್ರಯಾಣಿಕರು ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲ್ಲುತ್ತಾರೆ ಎಂಬುದು ಎಲ್ಲ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳಿಗೆ ಗೊತ್ತಿರುವ ವಿಚಾರ ಮಾತ್ರ ಅಲ್ಲ, ನೋಡಿರುವ ವಿಚಾರವೂ ಹೌದು. ಆದರೆ, ಯಾರೊಬ್ಬರೂ ಈ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಒದಗಿಸುವ ಕಡೆಗೆ ಗಮನ ಹರಿಸಿಲ್ಲ.
ಇಲ್ಲಿ ಶೌಚಾಲಯ ಇಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಇಲ್ಲಿಗೆ ಬರುವಷ್ಟೂ ಮಂದಿಗೆ ಕೂರಲು ಆಸನ ವ್ಯವಸ್ಥೆ ಇಲ್ಲ. ಇರುವ ಆಸನಗಳೂ ಸುಸಜ್ಜಿತವಾಗಿಲ್ಲ. ಹೀಗೆ, ಹೇಳುತ್ತಾ ಹೋದರೆ ಸಾಲು ಸಾಲು ಕೊರತೆಗಳೇ ಕಣ್ಣಿಗೆ ರಾಚುತ್ತವೆ.
ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ
- ಜಯಶಾಂತಕುಮಾರ್ ವಿಭಾಗೀಯ ಸಂಚಾರ ಅಧಿಕಾರಿ
ನಿಲ್ದಾಣಗಳಿಂದ ಆದಾಯ ಸಂಗ್ರಹಣೆಯೂ ಸಾಧ್ಯ! ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸುವುದರಿಂದ ಸಾಕಷ್ಟು ಹಣ ಪೋಲಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ ವಾಸ್ತವದಲ್ಲಿ ಹೈಟೆಕ್ ಬಸ್‌ನಿಲ್ದಾಣದಿಂದ ನಿತ್ಯವೂ ಸಂಬಂಧಿಸಿದ ಇಲಾಖೆಗೆ ಆದಾಯ ಬರುತ್ತದೆ. ಇಲ್ಲಿ ಜಾಹೀರಾತಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಮಾಲ್‌ಗಳು ಸೂಪರ್ ಮಾರ್ಕೆಟ್‌ಗಳಿಗೆ ಹೊಂದುವಂತಹ ವಿಶಾಲ ಮಳಿಗೆ ನಿರ್ಮಿಸುವುದರಿಂದ ಉತ್ತಮವಾದ ಬಾಡಿಗೆ ಸಿಗುತ್ತದೆ. ಜೊತೆಗೆ ಇನ್ನಷ್ಟು ಮಳಿಗೆಗಳನ್ನು ತೆರೆಯುವುದರಿಂದಲೂ ಸಾಕಷ್ಟು ಆದಾಯ ಸಂಗ್ರಹಿಸಬಹುದು. ಹಳೆಯ ಖಾಸಗಿ ಬಸ್‌ನಿಲ್ದಾಣ ಸೇರಿದಂತೆ ತಂಗುದಾಣಗಳಲ್ಲಿಯೂ ಜಾಹೀರಾತು ಫಲಕ ಹಾಕುವುದು ಡಿಜಿಟಲ್ ಪರದೆ ಅಳವಡಿಸುವುದು ಸೇರಿದಂತೆ ಇನ್ನಿತರ ಕ್ರಮಗಳ ಮೂಲಕ ಉತ್ತಮವಾದ ಆದಾಯ ಸಂಗ್ರಹಿಸಲೂ ಅವಕಾಶ ಇದೆ.
‘ಜಾಹೀರಾತು ನೀಡಲು ಹಿಂದೇಟು ಸೂಕ್ತ ನಿರ್ವಹಣೆ ಇದೆ’ ಬೇರೆ ಜಿಲ್ಲೆಗೆ ಹೋಲಿಸಿದರೆ ಮಡಿಕೇರಿಯಲ್ಲಿ ಬಸ್‌ನಿಲ್ದಾಣ ಬಸ್ ತಂಗುದಾಣಗಳಲ್ಲಿ ಜಾಹೀರಾತು ನೀಡಲು ಉದ್ದಿಮೆದಾರರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆದರೂ ನಮ್ಮ ವ್ಯಾಪ್ತಿಗೆ ಒಳಪಡುವ ಬಸ್‌ತಂಗುದಾಣಗಳು ನಿಲ್ದಾಣಗಳನ್ನು ಆಗಿಂದ್ದಾಗ್ಗೆ ತೊಳೆದು ಸ್ವಚ್ಛಗೊಳಿಸುತ್ತಿದ್ದೇವೆ. ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲಿದ್ದ ಹಳೆಯ ನೀರಿನ ಫಿಲ್ಟರ್ ತೆಗೆಸಲಾಗಿದ್ದು ಹೊಸ ಫಿಲ್ಟರ್ ಅಳವಡಿಸುತ್ತೇವೆ. ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ. *** ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ. ಬೇರೆ ಜಿಲ್ಲೆಗೆ ಹೋಲಿಸಿದರೆ ಮಡಿಕೇರಿಯಲ್ಲಿ ಬಸ್‌ನಿಲ್ದಾಣ ಬಸ್ ತಂಗುದಾಣಗಳಲ್ಲಿ ಜಾಹೀರಾತು ನೀಡಲು ಉದ್ದಿಮೆದಾರರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆದರೂ ನಮ್ಮ ವ್ಯಾಪ್ತಿಗೆ ಒಳಪಡುವ ಬಸ್‌ತಂಗುದಾಣಗಳು ನಿಲ್ದಾಣಗಳನ್ನು ಆಗಿಂದ್ದಾಗ್ಗೆ ತೊಳೆದು ಸ್ವಚ್ಛಗೊಳಿಸುತ್ತಿದ್ದೇವೆ. ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲಿದ್ದ ಹಳೆಯ ನೀರಿನ ಫಿಲ್ಟರ್ ತೆಗೆಸಲಾಗಿದ್ದು ಹೊಸ ಫಿಲ್ಟರ್ ಅಳವಡಿಸುತ್ತೇವೆ. ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.