ADVERTISEMENT

ಅಟ್ಟ ಸೇರುತ್ತಿವೆ ಮನೆಯ ಪರಿಕರಗಳು

ಮಳೆಗಾಲದಲ್ಲಿ ಹೊತ್ತಿಕೊಳ್ಳುತ್ತಿದ್ದ ಪೆಟ್ರೋಮ್ಯಾಕ್ಸ್ ಇಲ್ಲ; ಕಾಫಿ ಪುಡಿ ಮಾಡುವ ಯಂತ್ರವೂ ಕಾಣೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:24 IST
Last Updated 24 ಜುಲೈ 2025, 5:24 IST
ಕಾಫಿ ಪುಡಿ ಮಾಡುವ ಯಂತ್ರ
ಕಾಫಿ ಪುಡಿ ಮಾಡುವ ಯಂತ್ರ   

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳು ಈಗ ಅಟ್ಟ ಸೇರಲಾರಂಭಿಸಿವೆ. ಅವುಗಳ ಪೈಕಿ ಕಾಫಿ ರೋಸ್ಟರ್, ಕಾಫಿ ಪುಡಿಮಾಡುವ ಯಂತ್ರ, ಪೆಟ್ರೋಮ್ಯಾಕ್ಸ್ ಪ್ರಮುಖವಾದವು.

ಆಧುನಿಕತೆಯ ಬಿರುಗಾಳಿ ಇಂದು ಕೇವಲ ನಗರ ಮತ್ತು ಪಟ್ಟಣಗಳನ್ನು ಮಾತ್ರ ಆವರಿಸಿಲ್ಲ. ಗ್ರಾಮೀಣ ಪ್ರದೇಶವನ್ನೂ ಆಧುನಿಕತೆ ಪ್ರವೇಶಿಸಿದೆ. ಹೀಗಾಗಿ, ಈಚಿನ ವರ್ಷಗಳಲ್ಲಿ ಬಳಕೆಯಾಗುತ್ತಿದ್ದ ಈ ವಸ್ತುಗಳು ಈಗ ಮೂಲೆಗುಂಪಾಗಿವೆ.

ಕಾಲ ಸರಿದಂತೆ ಅಪ್ರಸ್ತುತವಾಗುವ, ಜನಬಳಕೆಯಿಂದ ದೂರವಾಗುವ ವಸ್ತುಗಳಲ್ಲಿ ಶ್ಯಾವಿಗೆ ಮಣೆ, ಕಾಫಿ ರೋಸ್ಟರ್, ಕಾಫಿ ಪುಡಿಮಾಡುವ ಮೆಷಿನ್, ಪೆಟ್ರೋಮ್ಯಾಕ್ಸ್ ಮತ್ತಿತರ ವಸ್ತುಗಳು ಸೇರಿವೆ.

ADVERTISEMENT

ಇವುಗಳಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದ ಕಾಫಿ ಹುರಿಯುವ ರೋಸ್ಟರ್‌, ಕಾಫಿ ಪುಡಿ ಮಾಡುವ ಮರದ ಯಂತ್ರ ಹಾಗೂ ಮಳೆಗಾಲದ ವಿದ್ಯುತ್ ಇಲ್ಲದ ಸಮಯದಲ್ಲಿ ಮನೆಯನ್ನು ಬೆಳಗುತ್ತಿದ್ದ ಪೆಟ್ರೋಮ್ಯಾಕ್ಸ್ ತೆರೆಮರೆಗೆ ಸರಿಯುತ್ತಿವೆ.

ಧೋ..ಎಂದು ಸುರಿಯುತ್ತಿದ್ದ ಮಳೆಯ ನಡುವೆ ದೂರದ ನಗರ ಪ್ರದೇಶಕ್ಕೆ ಹೋಗಿ ಕಾಫಿ ಪುಡಿ ಮಾಡಿಸಿಕೊಂಡು ಬರುವುದು ಹಿಂದೆ ಕಷ್ಟದ ಕೆಲಸವಾಗಿತ್ತು. ಆಗ ಮಳೆ ಬಿಡುವನ್ನೇ ಕೊಡುತ್ತಿರಲಿಲ್ಲ. ಅದಕ್ಕಾಗಿ ಮನೆಯಲ್ಲೇ ಕಾಫಿ ಹುರಿಯುವ ಪುಟ್ಟ ಯಂತ್ರ ಹಾಗೂ ಕಾಫಿ ಪುಡಿ ಮಾಡುವ ಯಂತ್ರವನ್ನು ಹೆಚ್ಚಾಗಿ ಬಳಸುತ್ತಿದ್ದರು. ಈಗ ಕಾಫಿ ಪುಡಿ ಮಾಡುವ ಮಿಲ್‌ಗಳು ನಗರದ ಪ್ರದೇಶದಲ್ಲಷ್ಟೇ ಅಲ್ಲ; ಪಟ್ಟಣ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳಿಗೂ ಬಂದಿವೆ. ಮುಂಚಿನಷ್ಟು ಬಿರುಸಿನ, ನಿರಂತರ ಮಳೆಯೂ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ರಟ್ಟೆ ಶ್ರಮ ಬಳಸಿ ಕಾಫಿಯ ಬೀಜಗಳನ್ನು ಹುರಿಯುವ, ಪುಡಿಮಾಡುವ ಕೆಲಸಕ್ಕೆ ಯಾರೂ ಮುಂದಾಗುವುದಿಲ್ಲ. ಹೀಗಾಗಿ, ಹಿಂದೆ ಬಳಕೆ ಮಾಡುತ್ತಿದ್ದ ಈ ಯಂತ್ರಗಳು ಈಗ ಸ್ತಬ್ಧಗೊಂಡಿವೆ.

ಇನ್ನು ಮಳೆಗಾಲದಲ್ಲಿ ಒಮ್ಮೆ ವಿದ್ಯುತ್ ಹೋದರೆ 10 ದಿನಗಳವರೆಗೂ ಮರಳಿ ವಿದ್ಯುತ್ ಬರುತ್ತಿರಲಿಲ್ಲ. ಆಗ ಮಕ್ಕಳ ಓದಿಗೆ, ಊಟ ಮಾಡಲು ಪೆಟ್ರೋಮ್ಯಾಕ್ಸ್‌ನ್ನೇ ಜನರು ನೆಚ್ಚಿಕೊಂಡಿದ್ದರು. ಆದರೆ, ಈಗ ವಿದ್ಯುತ್ ದುರಸ್ತಿ ಕಾರ್ಯ ವೇಗ ಪಡೆದಿದೆ. ಮಾತ್ರವಲ್ಲ, ಇನ್ವರ್ಟರ್‌ಗಳ ಬಳಕೆಯೂ ಹೆಚ್ಚಿದೆ. ವಿದ್ಯುತ್ ಇಲ್ಲದೇ ಹಲವು ಗಂಟೆಗಳ ಕಾಲ ಉರಿಯುವಂತಹ ಎಲ್‌ಇಡಿ ದೀಪಗಳೂ ಬಂದಿವೆ. ಹಾಗಾಗಿ, ಪೆಟ್ರೋಮ್ಯಾಕ್ಸ್ ಈಗ ಬಹುತೇಕ ಮನೆಗಳಲ್ಲಿ ನಂದುತ್ತಿದೆ.

ಪೆಟ್ರೊಮ್ಯಾಕ್ಸ್

- ಹಳೆಯ ವಸ್ತುಗಳನ್ನು ಜತನದಿಂದ ಕಾಪಾಡುವ ಹರೀಶ್

‘ಹಳೆಯ ವಸ್ತುಗಳನ್ನು ಬಳಸಲಾರದೆ ಮೂಲೆಗೆ ಎಸೆಯುತ್ತೇವೆ. ಮುಂದಿನ ತಲೆಮಾರಿಗೆ ಈ ವಸ್ತುಗಳ ಪರಿಚಯವೇ ಇರುವುದಿಲ್ಲ. ಮಕ್ಕಳಿಗೆ ಅವುಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ ಹಳೆಯ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದೇನೆ’ ಎನ್ನುತ್ತಾರೆ ಕಿಗ್ಗಾಲು ಗ್ರಾಮದ ಹರೀಶ್. ಇವರ ಮನೆಯಲ್ಲಿ ಒಪ್ಪವಾಗಿ ಜೋಡಿಸಿಟ್ಟ ಮನೆಯ ಪರಿಕರಗಳಿವೆ. ಹಳೆಯ ವಸ್ತುಗಳನ್ನು ಸಂಗ್ರಹಿಸುವ ಸಂದರ್ಭ ಹರೀಶ್ ಅವರಿಗೆ ವಿಭಿನ್ನ ಅನುಭವಗಳಾಗಿವೆ. ಬೇಡವೆಂದು ಎಸೆಯುವ ವಸ್ತುಗಳನ್ನು ಹಲವರು ಖುಷಿಯಿಂದ ಕೊಡುತ್ತಾರೆ. ಮತ್ತೆ ಕೆಲವರು ಕೊಡುವ ಮನಸ್ಸು ಮಾಡಿ ಬಳಿಕ ಕೊಡಲು ಹಿಂದೇಟು ಹಾಕುತ್ತಾರೆ. ಇನ್ನು ಕೆಲವರು ದುಪ್ಪಟ್ಟು ದರ ಕೇಳುತ್ತಾರೆ. ವಿಭಿನ್ನ ಮನೋಭಾವದ ಜನರನ್ನು ಸಂಪರ್ಕಿಸಿ ಸಾಕಷ್ಟು ವಸ್ತುಗಳನ್ನು ಸಂಗ್ರಹಿಸಿದ್ದೇನೆ. ಅಟ್ಟ ಸೇರುವ ಮತ್ತಷ್ಟು ಹಳೆಯ ವಸ್ತುಗಳನ್ನು ಸಂಗ್ರಹಿಸಿ ಮನೆಯನ್ನು ಮಿನಿ ವಸ್ತುಸಂಗ್ರಹಾಲಯವಾಗಿ ರೂಪಿಸುತ್ತೇನೆ ಎನ್ನುತ್ತಾರೆ ಅವರು. ಆದರೆ ಬಹುತೇಕರ ಮನೆಗಳಿಂದ ಹಳೆಯ ಕಾಲದ ದಿನಬಳಕೆಯ ವಸ್ತುಗಳು ಉಪಯೋಗವಿಲ್ಲದೇ ಮೂಲೆಸೇರಿವೆ. ಅಪರೂಪಕ್ಕೊಮ್ಮೆ ಹರೀಶ್ ಅವರಂತಹ ಆಸಕ್ತರ ಮನೆಯಲ್ಲಿ ಮಾತ್ರ ಮನೆಯ ಪರಿಕರಗಳನ್ನು ನೋಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.