ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತರು ಗರಿಗಳ ಭಾನುವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಶುಭ ಶುಕ್ರವಾರದ ಅಂಗವಾಗಿ ಕ್ರೈಸ್ತರು 40 ದಿನಗಳ ಕಾಲ ಉಪವಾಸ ಮತ್ತು ಮಾಂಸ ನಿರೋಧನೆಯೊಂದಿಗೆ ಪ್ರಾರ್ಥನೆ ವಿಶೇಷ ಧ್ಯಾನಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಸಂತ ಅಂತೋಣಿ ಚರ್ಚ್‌ನ ಧರ್ಮಗುರು ವಿಜಯಕುಮಾರ್ ಮಾತನಾಡಿ, ‘ಗರಿಗಳ ಭಾನುವಾರದ ದಿನ ಬೈಬಲ್ ಶುಭಸಂದೇಶದಲ್ಲಿ ಇರುವಂತೆ ಯೇಸು ಕ್ರಿಸ್ತನನ್ನು ರಾಜರಾಗಿ ಜನರು ಘೋಷಿಸಿ ಮೆರವಣಿಗೆಯನ್ನು ನಡೆಸಿದರ ಸ್ಮರಣೆಯ ಅಂಗವಾಗಿ ಗರಿಗಳನ್ನು ಆಶೀರ್ವಚಿಸಿ ಭಕ್ತರಿಗೆ ನೀಡುವುದು ಆಚರಣೆಯ ಭಾಗವಾಗಿದೆ’ ಎಂದರು.
ಧರ್ಮಗುರು ವಿಜಯಕುಮಾರ್ ಅವರು ಸಂತ ಮೇರಿ ಶಾಲಾ ಆವರಣದಲ್ಲಿ ತೆಂಗಿನ ಗರಿಗಳನ್ನು ಆಶೀರ್ವಚಿಸಿ ಕ್ರೈಸ್ತ ಭಕ್ತರಿಗೆ ವಿತರಿಸಿದರು.
ನಂತರ ಶಾಲಾ ಆವರಣದಿಂದ ಚರ್ಚ್‌ವರೆಗೆ ಮೆರವಣಿಗೆಯನ್ನು ನಡೆಸಿ ವಿಶೇಷ ಗಾಯನ, ಬಲಿಪೂಜೆ, ಪ್ರಬೋಧನೆಯನ್ನು ಆರ್ಪಿಸಿದರು. ಇದರೊಂದಿಗೆ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು.
ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆ, ಪ್ರಬೋಧನೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.