ಮಡಿಕೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಗೃಹಜ್ಯೋತಿ’ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರು ಕೇಂದ್ರಕ್ಕೆ ಹೋದಾಗ ಸರ್ವರ್ ಇರಲ್ಲ, ಸರ್ವರ್ ಇದ್ದಾಗ ಗ್ರಾಹಕರು ಇಲ್ಲ ಎನ್ನುವ ಸ್ಥಿತಿ ಎಲ್ಲೆಡೆ ಇದೆ. ಇದರಿಂದಾಗಿ ಅರ್ಜಿ ಸಲ್ಲಿಕೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಕೊನೆಯಿಂದ 3ನೇ ಸ್ಥಾನದಲ್ಲಿದೆ.
ಸಾಮಾನ್ಯವಾಗಿ ಬೆಳಿಗ್ಗೆ ಹೊತ್ತು ಎಲ್ಲ ಕೇಂದ್ರಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ರಾಜ್ಯದೆಲ್ಲೆಡೆ ಇದೇ ಸಮಯಕ್ಕೆ ವೆಬ್‌ಸೈಟ್ ತೆರೆಯುವುದರಿಂದ ಸರ್ವರ್ ಸಮಸ್ಯೆಯಾಗಿ ವೆಬ್‌ಸೈಟ್ ತೆರೆಯುವುದೇ ಇಲ್ಲ. ತೆರೆದರೂ ಒಂದೊಂದು ಹಂತವೂ ನಿಧಾನವಾಗುತ್ತದೆ. ಈ ಕಾರಣದಿಂದ ಕಾದು ಕಾದು ಸಾಕಾಗಿ ಸಾರ್ವಜನಿಕರು ಮನೆಯತ್ತ ಹೊರಡುತ್ತಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು ತನ್ನ ಎಲ್ಲಾ ಶಾಖಾ ಕಚೇರಿಗಳಲ್ಲಿ ತಲಾ ಒಂದೊಂದು, ಉಪವಿಭಾಗೀಯ ಹಾಗೂ ವಿಭಾಗೀಯ ಕಚೇರಿಗಳಲ್ಲಿ ತಲಾ ಎರಡೆರಡು ಕೌಂಟರ್‌ಗಳು ಸೇರಿದಂತೆ ಒಟ್ಟು 35 ಕೌಂಟರ್‌ಗಳನ್ನು ಗೃಹಜ್ಯೋತಿ ಯೋಜನೆಯ ನೋಂದಣಿಗಾಗಿಯೇ ತೆರೆದಿದೆ. ಈ ಮಧ್ಯೆ ‘ಗ್ರಾಮ ಒನ್’ ಸೇರಿದಂತೆ ಇತರೆ ಕೇಂದ್ರಗಳು ಸೇರಿ ಒಟ್ಟು 69 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿದೆ.
ಇದು ಆರಂಭದ ಹಂತ. ದಿನ ಕಳೆದಂತೆ ವೆಬ್‌ಸೈಟ್‌ನ ಸರ್ವರ್ ಅನ್ನು ಬಲಗೊಳಿಸಿ, ಸುಲಲಿತ ಅರ್ಜಿ ಸಲ್ಲಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂಬುದು ಕೇವಲ ಗ್ರಾಹಕರು ಮಾತ್ರವಲ್ಲ ಸೆಸ್ಕ್ ಇಲಾಖೆಯ ಅಧಿಕಾರಿಗಳ ನಂಬಿಕೆಯೂ ಆಗಿದೆ. ಹಲವು ಮಂದಿ ನಿತ್ಯವೂ ಸೆಸ್ಕ್ ಕಚೇರಿಗೆ ಬಂದು ಹೋಗುವುದು ಮಾತ್ರ ಇನ್ನೂ ನಿಂತಿಲ್ಲ.
ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗಳಲ್ಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದರೂ, ವೆಬ್‌ಸೈಟ್ ತೆರೆದುಕೊಳ್ಳುತ್ತಿಲ್ಲ. ಪದೇಪದೇ ಪ್ರಯತ್ನಿಸಿ ಗ್ರಾಹಕರು ಬಸವಳಿಯುತ್ತಿದ್ದಾರೆ.
29ನೇ ಸ್ಥಾನ: ‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆಯ ಪಟ್ಟಿಯಲ್ಲಿ ಕೊಡಗು ಜಿಲ್ಲೆ 29ನೇ ಸ್ಥಾನ ಪಡೆದಿದೆ. ದಾವಣಗೆರೆಯಲ್ಲಿ 174 ಕೇಂದ್ರಗಳಿದ್ದು, 11,209 ಮಂದಿ ಅರ್ಜಿ ಸಲ್ಲಿಸಿದ್ದು, ಮೊದಲ ಸ್ಥಾನದಲ್ಲಿದೆ. 10,121 ಅರ್ಜಿ ಸಲ್ಲಿಕೆಯಾಗಿರುವ ಮೈಸೂರು ದ್ವಿತೀಯ ಸ್ಥಾನದಲ್ಲಿದೆ. ಆದರೆ, ಕೊಡಗು ಮಾತ್ರ ಕೊನೆಯಿಂದ 3ನೇ ಸ್ಥಾನದಲ್ಲಿದೆ.
ಕೊಡಗಿನಲ್ಲಿ ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆಗೆ ಇಲ್ಲಿ ಕೇಂದ್ರಗಳ ಸಂಖ್ಯೆಯೂ ಕಡಿಮೆ ಇರುವುದು ಕಾರಣ ಎನಿಸಿದೆ. ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ 69 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಲೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಒಂದು ವೇಳೆ ಸರ್ವರ್ ವೇಗ ಹೆಚ್ಚಾದರೆ ನಿಶ್ಚಿತವಾಗಿಯೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚುರುಕಾಗಲಿದೆ.
ಸರ್ವರ್ ಸಮಸ್ಯೆಯಿಂದ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಹೆಚ್ಚು ಜನ ಗುಂಪಾಗಿ ಅರ್ಜಿ ಸಲ್ಲಿಸುವುದರಿಂದ ಸಮಸ್ಯೆ ಎದುರಾಗಿರಬಹುದು. ಒಂದು ವಾರದ ಬಳಿಕ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇನೆ.ಅಬ್ದುಲ್ ಖಾದರ್ ಗುಹ್ಯ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.