ADVERTISEMENT

‘ಪ್ಲಾಸ್ಟಿಕ್‌ ತ್ಯಜಿಸಿ; ದೇಶ ಉಳಿಸಿ’

ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:52 IST
Last Updated 18 ಜೂನ್ 2019, 14:52 IST
ಮಡಿಕೇರಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಜಾಥಾ ನಡೆಯಿತು
ಮಡಿಕೇರಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಜಾಥಾ ನಡೆಯಿತು   

ಮಡಿಕೇರಿ: ಉತ್ತಮ ಪರಿಸರ ಕಾಪಾಡಲು ಗಿಡ ನೆಡುವುದರ ಜತೆಗೆ ಪರಿಸರ ಸಂರಕ್ಷಣೆ ಮಾಡುವುದೂ ಅತೀ ಮುಖ್ಯ. ಆ ನಿಟ್ಟಿನಲ್ಲಿ ಯಾರೂ ಸಹ ಪ್ಲಾಸ್ಟಿಕ್ ಬಳಸಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಭವಿಷ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‌ನ್ನು ಬಳಸಬಾರದು. ತ್ಯಾಜ್ಯವನ್ನು ಆದಷ್ಟು ಕಡಿಮೆ ಮಾಡುವತ್ತ ಪ್ರತಿಯೊಬ್ಬರು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೆಚ್ಚಾಗಿ ಕಾಣಬಹುದಾಗಿದೆ. ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿಯೇ 400ಕ್ಕೂ ಹೆಚ್ಚು ಹುಲಿಗಳು ಹಾಗೂ 6 ಸಾವಿರಕ್ಕೂ ಹೆಚ್ಚು ಆನೆಗಳು ಇವೆ ಎಂದು ತಿಳಿಸಿದರು.

ಕಳೆದ 30–40 ವರ್ಷಗಳಲ್ಲಿ ಕಾಡು ಸಹ ಕಡಿಮೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ, ಮಾನವ ಮತ್ತು ಕಾಡಾನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಕಾಡಿನ ಸಂರಕ್ಷಣೆ ಅಗತ್ಯ ಎಂದು ಪ್ರತಿಪಾದಿಸಿದರು.

ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಸಂರಕ್ಷಣೆ ಮಾಡಬೇಕಿದೆ. ಹಸಿರು ಕರ್ನಾಟಕ ಕಾರ್ಯಕ್ರಮದ ಅಡಿ ಉಚಿತವಾಗಿ ಗಿಡಗಳನ್ನು ಅರಣ್ಯ ಇಲಾಖೆಯಿಂದ ನೀಡಲಾಗುವುದು. ಆ ನಿಟ್ಟಿನಲ್ಲಿ ಹೆಚ್ಚಿನ ಗಿಡಗಳನ್ನು ನೆಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಪರಿಸರ ಪ್ರಜ್ಞೆ ಮತ್ತು ಕಾಳಜಿ ಇರಬೇಕು. ಪರಿಸರ ಸಂರಕ್ಷಣೆ ಕುಟುಂಬದಿಂದಲೇ ಆರಂಭವಾಗಬೇಕು ಎಂದು ಅವರು ಸಲಹೆ ನೀಡಿದರು.

ಆಕಾಶವಾಣಿ ನಿಲಯದ ಕಾರ್ಯಕ್ರಮ ಅಧಿಕಾರಿ ವಿಜಯ ಅಂಗಡಿ ಮಾತನಾಡಿ, ಪ್ರತಿಯೊಬ್ಬರೂ ಬೈಸಿಕಲ್ ಬಳಸುವುದರಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದ 50 ರಾಷ್ಟ್ರಗಳಲ್ಲಿ ಬೈಸಿಕಲ್‌ನ್ನೇ ಯಥೇಚ್ಛವಾಗಿ ಬಳಸುತ್ತಾರೆ. ಇದರಿಂದ ಉತ್ತಮ ಪರಿಸರ ಕಾಣಬಹುದು ಎಂದು ತಿಳಿಸಿದರು.

ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್ ಪರಿಸರ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮರಿಯ ಕ್ರಿಸ್ತರಾಜ, ಸಿಂಗ್, ಪೌರಾಯುಕ್ತ ರಮೇಶ್, ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಉಪ ಪರಿಸರ ಅಧಿಕಾರಿ ಡಾ.ಸುಧಾ ಹಾಜರಿದ್ದರು.

ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿದರು. ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಸ್ವಾಗತಿಸಿದರು.

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪರಿಸರ ಜಾಗೃತಿ ಗೀತೆ ಹಾಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಮೊಹಿದ್ದೀನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.