ನಾಪೋಕ್ಲು: ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುವವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇಲ್ಲಿನ ಪೊಲೀಸ್ ಠಾಣೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ‘ವೈದ್ಯರಿಗೆ ಅವರದೇ ಆದ ಜವಾಬ್ದಾರಿ ಇರುತ್ತದೆ. ಅವರ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಅವರ ಮೇಲೆ ಒತ್ತಡ ಹೇರಿ ದಬ್ಬಾಳಿಕೆ ಮಾಡುವುದು ತಪ್ಪು’ ಎಂದರು.
ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ. ‘ಸಾಮಾಜಿಕ ಕಾರ್ಯಕರ್ತರು ಸಾರ್ವಜನಿಕರ ಸೇವೆಯಲ್ಲಿ ಸ್ವಲ್ಪ ಒಳ್ಳೆಯ ಕೆಲಸವನ್ನಾದರೂ ಮಾಡಬೇಕು. ಅದನ್ನು ಬಿಟ್ಟು ಕಿರುಕುಳ ನೀಡುವುದು ಸರಿಯಲ್ಲ’ ಎಂದರು.
ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪೂವಯ್ಯ ಮಾತನಾಡಿ, ‘ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಳ್ಳುವ ವ್ಯಕ್ತಿ ಪದೇ ಪದೇ ವೈದ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕವಾಗಿ ಸರಿಯಾಗಿದ್ದಾಗ ಮಾತ್ರ ನಾವು ರೋಗಿಗಳಿಗೆ ಉತ್ತಮವಾದ ರೀತಿಯಲ್ಲಿ ಚಿಕಿತ್ಸೆಯನ್ನು ಕೊಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ನಾವು ದಿನನಿತ್ಯ ಆಡಳಿತಾತ್ಮಕ ಕಾರ್ಯಗಳನ್ನು ಮತ್ತು ವೃತ್ತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದೇ ರೀತಿಯ ಮಾನಸಿಕ ಹಿಂಸೆ ಮತ್ತು ವೈದ್ಯರ ಕೊರತೆಯಿದ್ದರೂ ಕೂಡ ಗ್ರಾಮೀಣ ಪ್ರದೇಶವಾಗಿರುವ ನಾಪೋಕ್ಲುವಿನಲ್ಲಿ ಕೆಲಸ ಮಾಡುತ್ತಿದ್ದೇವೆ. ದಿನಕ್ಕೆ 200ರಿಂದ 300 ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ’ ಎಂದರು.
ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಪ್ರತೀಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಚ್.ಅಬ್ದುಲ್ ರಹಿಮಾನ್, ಗ್ರಾಮ ಪಂಚಾಯಿತಿ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ, ಎಂ.ಐ.ಮಹಮ್ಮದ್ ಕುರೇಶಿ, ಟಿ.ಎ.ಮಹಮ್ಮದ್, ವಿಎಸ್ಎಸ್ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ಶಿವಾಜಿ ಕ್ಲಬ್ ಅಧ್ಯಕ್ಷ ಕೆಲೇಟಿರ ದೀಪು ದೇವಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.