ADVERTISEMENT

ಉಪನ್ಯಾಸಕರ ಕೊರತೆ: ಕೊಡಗು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 4:50 IST
Last Updated 11 ಅಕ್ಟೋಬರ್ 2023, 4:50 IST
ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು
ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಪಾಠ ಕೇಳಲು ಉಪನ್ಯಾಸಕರನ್ನು ನೇಮಕ ಮಾಡಿ, ಕಾಲೇಜಿನ ಮೂಲಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಆಗ್ರಹಿಸಿ ಎಂದು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಂಗಳೂರು ವಿಶ್ವವಿದ್ಯಾಲಯದಿಂದ ಕೊಡಗು ವಿಶ್ವವಿದ್ಯಾಲಯದ ಸುಪರ್ದಿಗೆ ಕಾಲೇಜು ಬಂದ ಬಳಿಕ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದೆ. ಪಾಠ ಹೇಳಲು ಉಪನ್ಯಾಸಕರೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಈ ಸಮಸ್ಯೆ ಮೊದಲ ವರ್ಷದ ಪದವಿ, ಸ್ನಾತಕೋತ್ತರ ತರಗತಿಗಳಲ್ಲಿ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಕಾಲೇಜಿನ ಕಟ್ಟಡ ತೀರಾ ಶಿಥಿಲಾವಸ್ಥೆಯಲ್ಲಿದೆ. ಅದರ ದುರಸ್ತಿ ಕಾರ್ಯ ನಡೆದಿಲ್ಲ. ಪ‍್ರಯೋಗಾಲಯಗಳಲ್ಲಿ ವಿವಿಧ ಸೌಲಭ್ಯಗಳ ಕೊರತೆ ಇದೆ. ಹಾಸ್ಟೆಲ್ ವ್ಯವಸ್ಥೆಯಂತೂ ತೀರಾ ಶೋಚನೀಯವಾಗಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಕಾಲೇಜಿನ ಆಡಳಿತ ಮಂಡಳಿಗೆ ಈ ವಿಚಾರಗಳನ್ನು ಗಮನಕ್ಕೆ ತಂದರೂ ಅವರು ಅನುದಾನ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹಾಗಾಗಿ, ಕೊಡಗು ವಿಶ್ವವಿದ್ಯಾಲಯದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಸುದ್ದಿ ಅರಿತ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಎಸ್ ಆಲೂರ ವಿದ್ಯಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರು.

ಕೊಡಗು ವಿಶ್ವವಿದ್ಯಾಲಯವನ್ನು ಈಗಷ್ಟೇ ಸ್ಥಾಪಿಸಲಾಗಿದೆ. ಎಲ್ಲವೂ ಸರ್ಕಾರದ ಹಂತದಲ್ಲೇ ತೀರ್ಮಾನ ಕೈಗೊಳ್ಳಬೇಕಿದೆ. ಅದಕ್ಕಾಗಿ ಸ್ವಲ್ಪಕಾಲ ಕಾಯಬೇಕು ಎಂದು ಹೇಳಿದರು.

ಈಗಾಗಲೇ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸೌಲಭ್ಯಗಳಿಗಾಗಿ ಸರ್ಕಾರದ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರ ಎಲ್ಲ ಸಮಸ್ಯೆಗಳೂ ಈಡೇರಲಿವೆ ಎಂದು ಭರವಸೆ ನೀಡಿದರು.

‘ಪಾಠ ಇಲ್ಲದೇ ಪರೀಕ್ಷೆ’, ‘ತೀವ್ರ ಒತ್ತಡಕ್ಕೊಳಗಾಗಿರುವ ಉಪನ್ಯಾಸಕರು’, ‘ಕೊಡಗು ವಿ.ವಿ. ಕುಲಪತಿ ಎಲ್ಲಿ?’, ‘ಕೊಡಗು ವಿಶ್ವವಿದ್ಯಾಲಯ ಬೇಕೆ?’ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.

ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು

ಇಡೀ ಪಾಠಗಳಿಂದ ದೂರ ಉಳಿದ ಅವರು ಸರ್ಕಾರ ಬೇಗನೇ ಕೊಡಗು ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅ. 4ರಂದು ‘ಪ್ರಜಾವಾಣಿ’ ‘ಕಾರ್ಯಪ್ಪ ಕಾಲೇಜು ಅತಂತ್ರ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ಕಾಲೇಜಿನ ಸಮಸ್ಯೆಗಳನ್ನು ಕುರಿತು ಕೊಡಗು ವಿಶ್ವವಿದ್ಯಾಲಯದ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.