ADVERTISEMENT

ಮಡಿಕೇರಿಯಲ್ಲಿ ಹೆಚ್ಚಿದ ಶೀತಮಯ ವಾತಾವರಣ

ಹಾರಂಗಿಯಿಂದ 10 ಸಾವಿರ ಕ್ಯುಸೆಕ್ ನೀರು ನದಿಗೆ, ಉಕ್ಕಿ ಹರಿಯುತ್ತಿರುವ ನದಿಗಳು

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 4:55 IST
Last Updated 17 ಜೂನ್ 2025, 4:55 IST
   

ಮಡಿಕೇರಿ: ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುರೆದಿದೆ. ಇಡೀ ನಗರದಲ್ಲಿ ಶೀತಮಯವಾದ ವಾತಾವರಣ ನಿ‌ರ್ಮಾಣವಾಗಿದ್ದು, ಜನರು ನಡುಗುವಂತಾಗಿದೆ.

ಜುಲೈ ತಿಂಗಳಿನಲ್ಲಿ ಬೀಸುವಂತಹ ಗಾಳಿ ಜೂನ್‌ನಲ್ಲೇ ಬೀಸುತ್ತಿದೆ. ಚಳಿ ವಿಪರೀತ ಹೆಚ್ಚಿದೆ. ಎಲ್ಲೆಡೆ ಜನರು ನಡುಗುತ್ತಲೇ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ನಗರ ಬಿಟ್ಟರೆ ಕುಶಾಲನಗರದಲ್ಲಿ ಹೆಚ್ಚಿನ ಮಳೆ ಇಲ್ಲ. ಮಡಿಕೇರಿ ತಾಲ್ಲೂಕು ಹೊರತುಪಡಿಸಿದರೆ ಉಳಿದೆಲ್ಲ ತಾಲ್ಲೂಕುಗಳಲ್ಲಿಯೂ ಭಾರಿ ಮಳೆ ಎಂಬುದಿಲ್ಲ. ಆದರೆ, ಸಾಧಾರಣ ಮಳೆ ಬೀಳುತ್ತಲೇ ಇದೆ.

ADVERTISEMENT

ಮಡಿಕೇರಿಯ ಗರಿಷ್ಠ ತಾಪಮಾನ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರೆ ಖಾಸಗಿ ಹವಾಮಾನ ಸೇವಾ ಸಂಸ್ಥೆಗಳ ಪ್ರಕಾರ ಗರಿಷ್ಠ ತಾಪಮಾನವೇ 19ಕ್ಕೆ ಕುಸಿದಿದೆ. ಕನಿಷ್ಠ ತಾಪಮಾನ 16ಕ್ಕೆ ಇಳಿಕೆ ಕಂಡಿದೆ. ಇಡೀ ನಗರದ ನಾಗರಿಕರು ಶೀತಮಯ ಪರಿಸರದಲ್ಲಿ ಹೈರಣಾಗಿದ್ದಾರೆ.

ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ನೆನೆಯುತ್ತ, ನಡುಗುತ್ತಾ ಶಾಲೆ, ಕಾಲೇಜುಗಳಿಗೆ ತೆರಳುವುದು ತಪ್ಪಿತು.

ನಿರಂತರ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನದಿಗೆ 10 ಸಾವಿರ ಕ್ಯುಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ.

ಜುಲೈ 17ರಂದೂ ಹವಾಮಾನ ಇಲಾಖೆ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ನೀಡಿದೆ. 18ರ ನಂತರ ಮಳೆ ಇಳಿಮುಖವಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.