ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಭಾಗದ ನದಿ, ತೊರೆ, ತೋಡುಗಳು ತುಂಬಿ ಹರಿಯುತ್ತಿವೆ.
ಮಂಗಳವಾರ ರಾತ್ರಿಯವರೆಗೂ ಭಾರಿ ಗಾಳಿ ಬೀಸುತ್ತಿತ್ತು. ಬುಧವಾರ ಬೆಳಿಗ್ಗೆಯಿಂದ ಗಾಳಿ ಕಡಿಮೆಯಾಗಿದ್ದು, ಮಳೆಯ ರಭಸ ತೀವ್ರಗೊಂಡಿದೆ. ದಕ್ಷಿಣ ಕೊಡಗಿನ ಪ್ರಮುಖ ನದಿ ಲಕ್ಷ್ಮಣತೀರ್ಥ ಮೈದುಂಬಿದೆ. ಶ್ರೀಮಂಗಲ, ಬಲ್ಯಮಂಡೂರು, ಹರಿಹರ, ಕಾನೂರು, ಬಾಳೆಲೆ, ನಿಟ್ಟೂರು ಮಾರ್ಗವಾಗಿ ಹರಿಯುವ ಈ ನದಿ ಪ್ರವಾಹ ಅಕ್ಕಪಕ್ಕದ ಗದ್ದೆಗಳಿಗೂ ಆವರಿಸಿಕೊಂಡಿದೆ.
ಮಳೆಯ ರಭಸ ತೀವ್ರವಾದರೆ ಬಾಳೆಲೆ, ನಿಟ್ಟೂರು, ಕಾನೂರು ಭಾಗದ ನದಿ ಬಯಲಿನ ಗದ್ದೆಗಳು ಮತ್ತಷ್ಟು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಜತೆಗೆ ಹರಿಹರ ಬಲ್ಯಮಂಡೂರು ನಡುವಿನ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಪೊನ್ನಂಪೇಟೆ ಹದಿಕೇರಿ ನಡುವಿನ ಬೇಗೂರು ಕೊಲ್ಲಿ ಜಲಾವೃತಗೊಂಡು ಸಾಗರದಂತೆ ಕಂಡು ಬರತ್ತಿದೆ. ಶ್ರೀಮಂಗಲ ಬಳಿಯ ಕಿರುಹೊಳೆ ತುಂಬಿ ಹರಿಯುತ್ತಿದ್ದು ನದಿ ನೀರು ಪಕ್ಕದ ಅಡಿಕೆ ಮತ್ತು ತೆಂಗಿನ ತೋಟವನ್ನು ಆವರಿಸಿದೆ.
ಬಿರುನಾಣಿ, ಟಿ.ಶೆಟ್ಟಿಗೇರಿ ನಡುವಿನ ಬರಪೊಳೆ ಕೂಡ ಕಲ್ಲು ಬಂಡೆಗಳ ಉಕ್ಕಿ ಹರಿಯುತ್ತಿದೆ. ಇಲ್ಲಿ ರ‍್ಯಾಫ್ಟಿಂಗ್ ಸ್ಥಗಿತಗೊಳಿಸಲಾಗಿದೆ. ಬಿರುನಾಣಿ, ಪರಕಟಗೇರಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ರಭಸಕ್ಕೆ ಹೈಸೊಡ್ಲೂರು, ಪೊರಾಡ್ ನಡುವಿನ ರಸ್ತೆ ಬದಿ ಬರೆ ಕುಸಿದು ಭಾರಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಮಳೆ ತೀವ್ರಗೊಂಡಿರುವುದರಿಂದ ಬುಧವಾರ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದರಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಬಾಳೆಲೆ, ಪಟ್ಟಣಗಳು ಜನರೇ ಇಲ್ಲದೆ ಬಿಕೋ ಎನ್ನಿಸಿತು. ಕಾಫಿ ತೋಟದಲ್ಲಿಯೂ ಕೆಲಸವಿಲ್ಲದ್ದರಿಂದ ಎಲ್ಲ ಕಡೆಗಳಲ್ಲಿಯೂ ಸಾರ್ವಜನಿಕರ ಜತೆಗೆ ಕಾರ್ಮಿಕರ ಓಡಾಟ ಕಡಿಮೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.