ADVERTISEMENT

ಮಡಿಕೇರಿ | ನಿಂತ ಮಳೆ, ಕೃಷಿ ಚಟುವಟಿಕೆ ಚುರುಕು

ಮಡಿಕೇರಿಯಲ್ಲಿ ಬಿಸಿಲು– ಮಳೆಯ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 13:26 IST
Last Updated 1 ಜೂನ್ 2025, 13:26 IST
ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಬಲಮುರಿಯಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ ನದಿ  ಪ್ರಜಾವಾಣಿ ಚಿತ್ರ:ಸಿ.ಎಸ್.ಸುರೇಶ್
ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಬಲಮುರಿಯಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ ನದಿ  ಪ್ರಜಾವಾಣಿ ಚಿತ್ರ:ಸಿ.ಎಸ್.ಸುರೇಶ್   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ವಾರ ಆರಂಭವಾದ ಮಳೆ ಅಂತೂ, ಇಂತೂ ಭಾನುವಾರ ನಿಂತಿತು. ಗುರುವಾರ ರಾತ್ರಿ ಮತ್ತು ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ಬಿರುಸಾಗಿ ಸುರಿದು ಆತಂಕ ಮೂಡಿಸುತ್ತಿದ್ದ ವರುಣನ ಆರ್ಭಟ ಶನಿವಾರ ರಾತ್ರಿ ಕಡಿಮೆಯಾಯಿತು. ಇದರಿಂದ ಕೃಷಿಕರು ತೋಟದ ಕೆಲಸದತ್ತ ಗಮನ ಹರಿಸಲು ಮುಂದಾಗಿದ್ದಾರೆ.

ಮಡಿಕೇರಿಯಲ್ಲಿ ಭಾನುವಾರ ಇಡೀ ದಿನ ಬಿಸಿಲು ಮತ್ತು ಮಳೆಯ ಜುಗಲ್‌ಬಂದಿ ನಡೆಯಿತು. ಒಂದು ಕ್ಷಣ ಧೋ ಎಂದು ಸುರಿಯುತ್ತಿದ್ದ ಮಳೆ ಮತ್ತೆ ನಿಲ್ಲುತ್ತಿತ್ತು. ಬಿಸಿಲು ಮೂಡಿ ಒಂದಷ್ಟು ಹೊತ್ತು ಕಳೆಯುವುದರೊಳಗೆ ಮತ್ತೆ ವರ್ಷಧಾರೆಯಾಗುತ್ತಿತ್ತು. ಇಂತಹದ್ದೊಂದು ಅಪರೂಪದ ಕ್ಷಣ ಮಡಿಕೇರಿಯಲ್ಲಿ ಕಂಡುಬಂತು.

ಮತ್ತೆ ಮತ್ತೆ ಬಿರುಸಿನಿಂದ ಸುರಿದು ನಿಲ್ಲುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ಜನರು ಕೊಡೆ ಇಲ್ಲದೇ ಹೊರಗೆ ಹೋಗುವುದು ಸಾಧ್ಯವಿರಲಿಲ್ಲ. 

ADVERTISEMENT

ಶೀತಗಾಳಿ ಮುಂದುವರಿದಿದೆ. ಬೇಸಿಗೆಯ ಧಗೆ ಅಳಿದು, ಚಳಿಗಾಲದ ಚಳಿ ಆವರಿಸಿ ಜನರು ನಡುಗುವಂತಾಗಿದೆ. ಆಗಾಗ್ಗೆ ತುಸು ಬಿರುಸಿನಿಂದ ಗಾಳಿ ಬೀಸುತ್ತಿತ್ತು.

ಈ ಮಧ್ಯೆ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮಳೆ, ಗಾಳಿ ಕಡಿಮೆಯಾಗುವ ಮುನ್ಸೂಚನೆ ನೀಡಿದೆ. ಆದಾಗ್ಯೂ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಭಾನುವಾರ ಸಂಜೆಯ ನಂತರ ಮತ್ತೆ ಮಳೆ ಬಂದಿತು. ಮಳೆ ಮೋಡಗಳು ಅತ್ಯಂತ ವೇಗವಾಗಿ ಚಲಿಸುತ್ತಿದ್ದು, ಯಾವ ಕ್ಷಣದಲ್ಲಿ ಮಳೆ ಬರುವುದೋ ಎಂಬ ಗೊಂದಲದಲ್ಲೇ ಜನರಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿರುವ ಜನರು ತಮ್ಮ ತಮ್ಮ ತೋಟಗಳ ಕೆಲಸಗಳನ್ನು ಆರಂಭಿಸಲು ಚಿಂತಿಸಿದ್ದಾರೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಮತ್ತೆ ಮಳೆ ಸುರಿಯದೇ ಇದ್ದರೆ ಸೋಮವಾರದ ನಂತರ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.

ಜಿಲ್ಲೆಯಲ್ಲಿ ಜನರು ಇನ್ನೂ ಗದ್ದೆಗಳನ್ನು ಬಿತ್ತನೆಗೆ ಹಸನುಮಾಡಿಲ್ಲ. ತೋಟಗಳಿಗೆ ಗೊಬ್ಬರ ಹಾಕಿಲ್ಲ. ಮಳೆಗಾಲಕ್ಕಾಗಿ ಯಾವುದೇ ಬಗೆಯ ಪೂರ್ವಸಿದ್ಧತೆ ಮಾಡದೇ ಇರುವಾಗ ಅಕಾಲಿಕವಾಗಿ ಬೇಸಿಗೆಯಲ್ಲೇ ನಿರಂತರವಾಗಿ ಸುರಿದ ಧಾರಾಕಾರ ಮಳೆಯು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿತ್ತು. ಸದ್ಯ, ಮಳೆ ಬಿಡುವು ನೀಡುವ ಲಕ್ಷಣಗಳು ತೋರುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುವ ನಿರೀಕ್ಷೆ ಇದೆ.

ಈ ನಡುವೆ ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಮೆಚೂರು– ಕೋಟೆ ಪೆರಾಜೆ– ಕುಂಬಳಚೇರಿ ಕೂಡು ರಸ್ತೆಯ ತಡೆಗೋಡೆ ಕುಸಿದಿದೆ. ಇದೇ ರಸ್ತೆಯಲ್ಲಿ ಒಟ್ಟು 5 ಕಡೆ ಮಣ್ಣು ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.