ಮಡಿಕೇರಿ: ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ಕಥೆ, ಸ್ವಾತಂತ್ರ್ಯ ಚಳವಳಿಯಲ್ಲಿ ಹುತಾತ್ಮರಾದವರ ದೃಶ್ಯಾವಳಿಗಳನ್ನು ಮಕ್ಕಳು ಮೈದಾನದಲ್ಲಿ ಪ್ರಸ್ತುತಪಡಿಸುತ್ತಿದ್ದಂತೆ ಸೇರಿದ್ದ ಜನರ ಮನಸ್ಸುಗಳು ಆರ್ದಗೊಂಡವು. ದೇಶಪ್ರೇಮದ ಗೀತೆಗಳಿಗೆ ಒಬ್ಬರ ಮೇಲೊಬ್ಬರತ್ತಿ ಮಾನವ ಗೋಪುರ ನಿರ್ಮಿಸಿ ಎತ್ತರದಲ್ಲಿ ರಾಷ್ಟ್ರಧ್ವಜವಿಡಿದು ಬಾಲಕ, ಬಾಲಕಿಯರು ನಿಲ್ಲುತ್ತಿದ್ದಂತೆ ಗೊತ್ತಿಲ್ಲದ ರೀತಿಯಲ್ಲಿ ಕೈಗಳು ಸೆಲ್ಯುಟ್ ಮಾಡಿದವು. ಇಂತಹ ಅಪರೂಪದ ಕ್ಷಣಗಳನ್ನೆಲ್ಲ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು.
ಈ ಎಲ್ಲ ದೃಶ್ಯಾವಳಿಗಳು ಇಲ್ಲಿ ಭಾನುವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಕಂಡು ಬಂತು. ಸಚಿವ ಎನ್.ಎಸ್.ಭೋಸರಾಜು ಧ್ವಜಾರೋಹಣ ನೆರವೇರಿಸಿ ತಮ್ಮ ಸಂದೇಶ ನೀಡಿದ ನಂತರ ಶುರುವಾದ ಶಾಲಾ ವಿದ್ಯಾರ್ಥಿಗಳ ನೃತ್ಯಗಳು ಎಲ್ಲರ ಮನಗೆದ್ದವು.
ಮಡಿಕೇರಿಯ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಜಲಿಯನ್ ವಾಲಾಭಾಗ್ ಹತ್ಯಾಕಾಂಡ, ಮಂಗಳ್ ಪಾಂಡೆಯ ವೃತ್ತಾಂತ, ಉದಮ್ ಸಿಂಗ್ ಅವರ ಪರಾಕ್ರಮಗಳನ್ನು ತಮ್ಮ ನೃತ್ಯದಲ್ಲಿ ಮನಮುಟ್ಟುವಂತೆ ಅಭಿನಯಿಸುವಲ್ಲಿ ಸಫಲರಾದರು.
ಸಂತ ಮೈಕಲರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವೈವಿಧ್ಯತೆಯಲ್ಲಿ ಏಕತೆಯನ್ನು ತಮ್ಮ ನೃತ್ಯದಲ್ಲಿ ಪ್ರಸ್ತುತಪಡಿಸಿ, ಏಕತೆಯ ಸಂದೇಶ ಸಾರಿದರು.
ಬಾಲಕಿಯರ ಬಾಲಮಂದಿರದ ಮಕ್ಕಳು ಯೋಧರ ಕಥೆಯನ್ನು ಮನಮುಟ್ಟುವಂತೆ ಪ್ರದರ್ಶಿಸಿದರೆ, ಬಾಲಕರ ಬಾಲಮಂದಿರದ ಮಕ್ಕಳು ದೇಶಪ್ರೇಮ ಉಕ್ಕಿಸುವ ಹಾಡುಗಳಿಗೆ ಹೆಜ್ಜೆ ಹಾಕಿದರು.
ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ನಿರ್ಮಿಸಿದ ಮಾನವ ಗೋಪುರಗಳನ್ನು ಕಂಡು ಪ್ರೇಕ್ಷಕರು ಭಾರಿ ಕರತಾಡನ ಮೊಳಗಿಸಿದರು. ನಿಟ್ಟೂರಿನ ಗಿರಿಜನ ಆಶ್ರಮ ಶಾಲೆಯ ಮಕ್ಕಳು ಬುಡಕಟ್ಟು ನೃತ್ಯ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶಿಷ್ಟ ಕಲೆ ತುಂಬಿದರು.
ಕೊನೆಯಲ್ಲಿ ಅದ್ಭುತವಾಗಿ ಪ್ರದರ್ಶನಗೊಂಡಿದ್ದೇ ಕೂಡಿಗೆಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ಡೊಳ್ಳು ಕುಣಿತ. ನುರಿತ ಕಲಾವಿದರಿಗೆ ಸರಿಸಮ ಎನಿಸುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೊಳ್ಳು ಕುಣಿತ ಸೂಜಿಗಲ್ಲಿನಂತೆ ಸೆಳೆಯಿತು. ಡೊಳ್ಳು ಬಾರಿಸುತ್ತಲೇ ಮಾನವ ಗೋಪುರ ನಿರ್ಮಿಸಿದ ಪ್ರಸಂಗಗಳನ್ನು ತಮ್ಮ ಚಕಿತದ ಕಣ್ಣುಗಳಿಂದ ಪ್ರೇಕ್ಷಕರು ವೀಕ್ಷಿಸಿದರು.
ಮೈದಾನದಲ್ಲಿ ಒಟ್ಟು 28 ತಂಡಗಳಿಂದ ನಡೆದ ಪಥಸಂಚಲನ ಆಕರ್ಷಕವಾಗಿತ್ತು. ಪರೇಡ್ ಕಮಾಂಡರ್ ಆಗಿ ಪ್ರೊಬೇಷನರಿ ಎಎಸ್‌ಪಿ ಡಾ.ಎನ್.ಜೆ.ಬೆನಕ ಪ್ರಸಾದ್ ಹಾಗೂ ಸೆಕೆಂಡ್ ಇನ್ ಕಮಾಂಡರ್ ಆಗಿ ಇನ್‌ಸ್ಪೆಕ್ಟರ್ ಚೆನ್ನನಾಯಕ ಪಥಸಂಚಲನದ ತಂಡವನ್ನು ಮುನ್ನಡೆಸಿದರು.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಸಿವಿಲ್ ಪೊಲೀಸ್ ಗೃಹರಕ್ಷಕ ದಳ ಅರಣ್ಯ ಇಲಾಖೆ ಕೊಡಗು ಸೈನಿಕ ಶಾಲೆ ಎಫ್‌ಎಂಸಿ ಕಾಲೇಜು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆ ಕೊಡಗು ವಿದ್ಯಾಲಯ ಜನರಲ್ ತಿಮ್ಮಯ್ಯ ಸಂತ ಜೋಸೆಫರ ಪ್ರೌಢಶಾಲೆ ಸಂತ ಮೈಕಲರ ಪ್ರೌಢಶಾಲೆ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದ ಎನ್‌ಸಿಸಿ ತಂಡಗಳು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆ ಪಿಎಂಶ್ರೀ ಜಿಎಂಪಿ ಶಾಲೆ ಸಂತ ಮೈಕಲರ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಸೇವಾದಳ ತಂಡಗಳು ಸಂತ ಜೋಸೆಫರ ಪ್ರಾಥಮಿಕ ಶಾಲೆ ಪ್ರೌಢಶಾಲೆ ಜನರಲ್ ತಿಮ್ಮಯ್ಯ ಶಾಲೆ ಎಎಲ್‌ಜಿ ಕ್ರೆಸೆಂಟ್ ಶಾಲೆ ಬ್ಲಾಸಂ ಪ್ರೌಢಶಾಲೆಯ ಸ್ಕೌಟ್ಸ್ ತಂಡಗಳು ಜನರಲ್ ತಿಮ್ಮಯ್ಯ ಶಾಲೆ ಎಎಲ್‌ಜಿ ಕ್ರೆಸೆಂಟ್ ಶಾಲೆ ರಾಜೇಶ್ವರಿ ವಿದ್ಯಾಲಯ ಬ್ಲಾಸಂ ಶಾಲೆ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಸ್ಕೌಟ್ಸ್ ತಂಡಗಳು ಪಥಸಂಚಲನ ನಡೆಸಿದವು.
ಇದಕ್ಕೆ ಹೆಡ್‌ಕಾನ್‌ಸ್ಟೆಬಲ್ ಎಂ.ಎನ್.ವಿಜಯ್ ಅವರ ನೇತೃತ್ವದ ಪೊಲೀಸ್ ಬ್ಯಾಂಡ್‌ನವರ ವಾದ್ಯಗೋಷ್ಠಿ ತಿಲಕಪ್ರಾಯವಾಗಿತ್ತು.
ಎನ್.ಎಸ್.ಭೋಸರಾಜು ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ‘ಸಂವಿಧಾನಕ್ಕೆ ಬದ್ದವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅಗತ್ಯವಾಗಿದೆ. ಆಗ ಮಾತ್ರವೇ ಸಂವಿಧಾನದ ಅತೀ ಶ್ರೇಷ್ಠ ಮೌಲ್ಯಗಳಾದ ಸಮಾನತೆ ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರುತ್ತದೆ’ ಎಂದು ಪ್ರತಿಪಾದಿಸಿದರು. ಸರ್ಕಾರದ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿದ ಅವರು ಜಿಲ್ಲೆಯಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳನ್ನು ತಮ್ಮ ಭಾಷಣದಲ್ಲಿ ಸವಿಸ್ತಾರವಾಗಿ ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.