ADVERTISEMENT

ಮಡಿಕೇರಿ: ‘ಸೈನಿಕಶಾಲಾ ಪರೀಕ್ಷಾ ಮಾರ್ಗದರ್ಶನ ಶಿಬಿರಗಳು ಹೆಚ್ಚಾಗಲಿ’

ಎಸ್.ವಿ.ಯೂ.ಎಂ.- ಮಿಸ್ಟಿ ಹಿಲ್ಸ್ ವತಿಯಿಂದ ಸೈನಿಕಶಾಲಾ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:56 IST
Last Updated 14 ಜನವರಿ 2026, 5:56 IST

ಮಡಿಕೇರಿ: ದಕ್ಷಿಣ ಕರ್ನಾಟಕದ ದಕ್ಷಿಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಸೇರ್ಪಡೆಯಾಗಲು ಈ ವ್ಯಾಪ್ತಿಯಲ್ಲಿ ಪರೀಕ್ಷಾ ಮಾರ್ಗದರ್ಶಿ ಶಿಬಿರಗಳು ಹೆಚ್ಚಾಗಬೇಕು ಎಂದು ಸರಗೂರುವಿನಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ಮುಖ್ಯಸ್ಥ ಎಸ್.ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ರೋಟರಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 10 ಭಾನುವಾರಗಳಂದು ಆಯೋಜಿಸಲಾಗಿದ್ದ ಸೈನಿಕಶಾಲಾ ಪ್ರವೇಶ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೈನಿಕ ಶಾಲೆಗೆ ಸೇರ್ಪಡೆಯಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳು, ಪೋಷಕರ ಆಸೆಯಾಗಿರುತ್ತದೆ. ಆದರೆ, ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷಾ ಮಾರಗದರ್ಶನ ಮತ್ತು ತರಬೇತಿಯ ಕೊರತೆ ಈವರೆಗೂ ಕಾಡುತ್ತಿತ್ತು. ಸೈನಿಕಶಾಲೆಯ ಆಯ್ಕೆಗಾಗಿ ಬಹುಮುಖ್ಯವಾದ ಪರೀಕ್ಷೆಯ ಹಂತದಲ್ಲಿ ಬಹುತೇಕ ವಿದ್ಯಾರ್ಥಿಗಳು ಮಾರ್ಗದರ್ಶನದ ಕೊರತೆಯಿಂದ ಆಯ್ಕೆಯಾಗದೇ ಸೈನಿಕಶಾಲೆಗೆ ಸೇರಪಡೆಯಾಗುವ ಕನಸು ನನಸಾಗದೇ ನಿರಾಶರಾಗುತ್ತಿದ್ದರು. ಇದನ್ನು ಗಮನಿಸಿಯೇ ಸರಗೂರಿನಲ್ಲಿ ಕಳೆದ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿವೇಕಾನಂದಯೂತ್ ಮೂವ್‌ಮೆಂಟ್ ಆಶ್ರಯದ ಸೈನಿಕಶಾಲೆ ವತಿಯಿಂದ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 10 ಭಾನುವಾರಗಳಂದು ಮಡಿಕೇರಿಯಲ್ಲಿ ಪರೀಕ್ಷಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

ADVERTISEMENT

ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತವಾದ ಮಾರ್ಗದರ್ಶನ ದೊರಕಿದೆ ಎಂದು ಹೆಮ್ಮೆಯಿಂದ ನುಡಿದರು. ಕೇವಲ ವಿದ್ಯಾರ್ಥಿಗಳು ಮಾತ್ರ ಸೈನಿಕ ಶಾಲಾ ಸೇರ್ಪಡೆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಸಾಲದು, ಪೋಷಕರು ಕೂಡ ಮಕ್ಕಳಿಗೆ ಅಗತ್ಯ ಸಿದ್ದತಾ ಸಲಹೆ, ಮಾರ್ಗದರ್ಶನ ನೀಡಿ ಪ್ರೇರಣೆಯಾಗುವುದು ಮುಖ್ಯ ಎಂದೂ ಪ್ರವೀಣ್ ಕಿವಿಮಾತು ಹೇಳಿದರು.

ಕೂಡಿಗೆ ಮತ್ತು ಸರಗೂರಿನಲ್ಲಿ ಕಾರ್ಯಾಚರಿಸುತ್ತಿರುವ ಸೈನಿಕಶಾಲೆಗಳಿಗೆ ಮುಂದಿನ ವರ್ಷಗಳಲ್ಲಿ ಕೊಡಗಿನಿಂದಲೂ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗುವುದು ಖಂಡಿತಾ ಎಂದೂ ಅವರು ಆಶಾಭಾವನೆ ವ್ಯಕ್ತಪಡಿಸಿದರು.

ಶಿಬಿರದ ಸಂಚಾರಕ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ದೇಶಕ ಡಾ.ಸಿ.ಆರ್.ಪ್ರಶಾಂತ್ ಮಾತನಾಡಿ, ಪೋಷಕರು ಕೂಡ ಅತ್ಯಂತ ಉತ್ಸುಕತೆಯಿಂದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಈ ರೀತಿ ಪೋಷಕರೂ ಸೈನಿಕಶಾಲೆಗೆ ತಮ್ಮ ಮಕ್ಕಳು ಸೇರಬೇಕೆಂಬ ಗುರಿ ಹೊಂದಿದಾಗ ಅಂಥ ವಿದ್ಯಾರ್ಥಿ, ಪೋಷಕರ ಉದ್ದೇಶ ಈಡೇರಲು ಸುಲಭಸಾಧ್ಯ ಎಂದರಲ್ಲದೇ, ಪ್ರತೀ ವರ್ಷವೂ ಈ ಶಿಬಿರವನ್ನು ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮಡಿಕೇರಿಯಲ್ಲಿ ಆಯೋಜಿಸಲಿದೆ’ ಎಂದು ಘೋಷಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರಾರಂಭಿಕ ವರ್ಷದಲ್ಲಿ 15 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದರು.

ಸರಗೂರು ಸೈನಿಕಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಏರ್ ಕಮೋಡೋರ್ ಆರ್ ಎನ್..ಜಯಸಿಂಹ, ಮೈಸೂರಿನ ಸ್ಟೇಲ್ಲರೀಸ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಕಡ್ತಾರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ನ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು.

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ಇದೇ ವೇಳೆ ಶಿಬಿರಾರ್ಥಿಗಳಿಗೆ 10 ಭಾನುವಾರ ಪರೀಕ್ಷಾ ತರಬೇತಿ ನೀಡಿದ ಶಿಕ್ಷಕ ವರ್ಗದವರನ್ನು ಸನ್ಮಾನಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಬಿ.ಜಿ.ಅನಂತಶಯನ, ಅಂಬೆಕಲ್ ಜೀವನ್, ಅನಿಲ್ ಎಚ್.ಟಿ. ಬಿ.ಕೆ.ರವೀಂದ್ರ ರೈ, ಪ್ರಮೋದ್ ಕಮಾರ್ ರೈ, ರಾಜೇಶ್ ಪಿ.ಆರ್. ಶಂಕರ್ ಪೂಜಾರಿ, ಜಂಯತ್ ಪೂಜಾರಿ, ಪಿ.ವಿ. ಅಶೋಕ್, ಶ್ರೀಹರಿರಾವ್, ಪ್ರಕಾಶ್ ಪೂವಯ್ಯ, ಗಾನಾ ಪ್ರಶಾಂತ್, ನಮಿತಾ ರೈ, ಶಫಾಲಿ ರೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.