ADVERTISEMENT

ಮಳೆಯ ನಡುವೆ ಶಾಲಾ ಪ್ರಾರಂಭೋತ್ಸವ ಇಂದು

ಎಲ್ಲ ಶಾಲೆಗಳಲ್ಲೂ ಪೂರ್ಣಗೊಂಡಿದೆ ಸಿದ್ಧತಾ ಕಾರ್ಯ

ಕೆ.ಎಸ್.ಗಿರೀಶ್
Published 31 ಮೇ 2025, 6:29 IST
Last Updated 31 ಮೇ 2025, 6:29 IST
ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯ ಜಿಎಂಪಿ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಳ ಸ್ವಚ್ಛತಾ ಕಾರ್ಯ ಬುಧವಾರ ಭರದಿಂದ ನಡೆಯಿತು
ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯ ಜಿಎಂಪಿ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಳ ಸ್ವಚ್ಛತಾ ಕಾರ್ಯ ಬುಧವಾರ ಭರದಿಂದ ನಡೆಯಿತು   

ಮಡಿಕೇರಿ: ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಬಿರುಸಿನ ಗಾಳಿಯ ನಡುವೆ ಕೊಡಗು ಜಿಲ್ಲೆಯಲ್ಲಿರುವ ಎಲ್ಲ 623 ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವ ಮೇ 29ರಂದು ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ.

ಪ್ರತಿ ವರ್ಷ ಶಾಲೆ ಆರಂಭವಾಗಿ, ಪಾಠ ಪ್ರವಚನಗಳೆಲ್ಲವೂ ಒಂದು ಹಂತಕ್ಕೆ ಬಂದಾಗ ಮಳೆ ಆರಂಭವಾಗುತ್ತಿತ್ತು. ಆಗ ಮಳೆಯ ಕಾರಣಕ್ಕೆ ರಜೆ ಘೋಷಿಸಲಾಗುತ್ತಿತ್ತು. ಆದರೆ, ಈ ಬಾರಿ ಬೇಸಿಗೆಯಲ್ಲೇ ಮಳೆಗಾಲ ಆರಂಭವಾಗಿರುವುದು ಶಾಲಾ ಪ್ರಾರಂಭೋತ್ಸವಕ್ಕೆ ಆತಂಕವನ್ನು ತಂದೊಡ್ಡಿದೆ.

ಆರಂಭದಲ್ಲೇ ರಜೆ ನೀಡದಿರಲು ನಿರ್ಧರಿಸಿರುವ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳನ್ನೂ ಏಕಕಾಲಕ್ಕೆ ಆರಂಭಿಸಬೇಕು ಎಂದು ನಿರ್ದೇಶಿಸಿದೆ. ಮಳೆ ಕಡಿಮೆಯಾಗಿದ್ದರೂ ಬೀಸುತ್ತಿರುವ ಬಿರುಗಾಳಿ ಕೇವಲ ಮಕ್ಕಳು, ಪೋಷಕರು ಮಾತ್ರವಲ್ಲ ಶಿಕ್ಷಕರಲ್ಲೂ ಆತಂಕ ತರಿಸಿದೆ.

ADVERTISEMENT

ಈ ಮಧ್ಯೆ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ರೆಡ್‌ ಅಲರ್ಟ್ ನೀಡದೇ ಇರುವುದರಿಂದ ಮಳೆ ಮತ್ತು ಗಾಳಿ ಕಡಿಮೆಯಾಗಬಹುದು ಎಂಬ ನಿರೀಕ್ಷೆಯೂ ಇದೆ. ಆದರೂ, ಅಪಾಯಕಾರಿ ಸ್ಥಳಗಳಿಂದ ಬರುವ ಮಕ್ಕಳನ್ನು ಮಳೆ ಕಡಿಮೆಯಾಗುವವವರೆಗೂ ಶಾಲೆಗೆ ಬರುವುದಕ್ಕೆ ವಿನಾಯಿತಿ ನೀಡಲು ಆಯಾ ಶಾಲೆಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಸದ್ಯ, ಜಿಲ್ಲೆಯಲ್ಲಿ ಶಾಲೆಯ ಸಂಪರ್ಕ ತಪ್ಪಿ ಹೋಗುವಂತಹ ಪ್ರದೇಶಗಳಿಲ್ಲ. ಮಳೆ ಕಡಿಮೆಯಾಗುತ್ತಿರುವುದರಿಂದ ಎಲ್ಲ ಶಾಲೆಗೂ ಸಂಪರ್ಕ ಸಾಧ್ಯವಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಈಗಾಗಲೇ ಬಹುತೇಕ ಎಲ್ಲ ಶಾಲೆಗಳಲ್ಲೂ ಶಿಕ್ಷಕರು ಒಂದೆರಡು ದಿನಗಳ ಮೊದಲೇ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಕೆಲವೊಂದು ಶಾಲೆಗಳಲ್ಲಿ ತಳಿರು ತೋರಣ ಕಟ್ಟಿದ್ದಾರೆ. ಮತ್ತೆ ಕೆಲವು ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲು ಯತ್ನಿಸಿದ್ದಾರೆ. ಆದರೆ, ಬೀಳುತ್ತಿರುವ ಮಳೆ ಇಂತಹ ಪ್ರಯತ್ನಗಳಿಗೆ ತಣ್ಣೀರೆರಚಿದೆ.

ಮೊದಲ ದಿನ ಶಿಕ್ಷಣ ಇಲಾಖೆ ಹೊರತುಪಡಿಸಿ ಇತರೆ ಇಲಾಖೆಯ ಅಧಿಕಾರಿಗಳನ್ನು ಶಾಲಾ ಪ್ರಾರಂಭೋತ್ಸವದಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಇವರು ಪ್ರಾರಂಭೋತ್ಸವ ನೀಡಿ, ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಲಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ, ‘ಕಳೆದ ವರ್ಷ 71 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಈ ವರ್ಷ ಪೋಷಕರೊಂದಿಗೆ ಚರ್ಚೆ ನಡೆಸಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದರು.

ಮೊದಲ ದಿನವೇ ಮಕ್ಕಳಿಗೆ ಹೂ ನೀಡಿ ಸಂಭ್ರಮದಿಂದ ಬರ ಮಾಡಿಕೊಳ್ಳಲಾಗುತ್ತದೆ. ಕೆಲವೊಂದು ಶಾಲೆಗಳಲ್ಲಿ ವಿಭಿನ್ನವಾಗಿ ಸ್ವಾಗತಿಸಲು ಚಿಂತನೆ ನಡೆದಿದೆ. ಮೊದಲ ದಿನವೇ ಬಿಸಿಯೂಟ ನೀಡಲಾಗುತ್ತದೆ.

ಮಡಿಕೇರಿಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕಾರ್ಯಕ್ರಮದ ಅಡುಗೆ ಕೋಣೆಯನ್ನು ಬುಧವಾರ ಶುಚಿಗೊಳಿಸಲಾಯಿತು

- ದುರಸ್ತಿಗೆ ಬಂದಿದೆ ₹ 2 ಕೋಟಿಗೂ ಅಧಿಕ ಅನುದಾನ

ಕೊಡಗು ಜಿಲ್ಲೆಯಲ್ಲಿ ಶಿಥಿಲ ಶಾಲಾ ಕಟ್ಟಡಗಳ ದುರಸ್ತಿಗೆ ಸರ್ಕಾರ ₹ 2 ಕೋಟಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಪಂಚಾಯತ್ ರಾಜ್ ಇಲಾಖೆಯು ದುರಸ್ತಿ ಮಾಡಬೇಕಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ ‘ಶಾಲಾ ಕಟ್ಟಡಗಳ ದುರಸ್ತಿಗೆ ₹ 2 ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸುತ್ತಿದ್ದಾರೆ. ಆದರೆ ಮಳೆ ಹೆಚ್ಚಿರುವುದರಿಂದ ಈ ಕಾರ್ಯ ಪೂರ್ಣಗೊಂಡಿಲ್ಲ. ಅತಿ ಶೀಘ್ರದಲ್ಲೆ ದುರಸ್ತಿ ಕಾರ್ಯ ನಡೆಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.