ADVERTISEMENT

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 5:05 IST
Last Updated 30 ಏಪ್ರಿಲ್ 2025, 5:05 IST
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ  ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ  ನಡೆಯಿತು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ  ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ  ನಡೆಯಿತು.   

ಸೋಮವಾರಪೇಟೆ: ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1ನೇ ವಾರ್ಡ್‌ನಲ್ಲಿ ಮನೆದಳದ ದಾಖಲೆ ತಿದ್ದುಪಡಿ ಮಾಡಿ, ಹೆಚ್ಚುವರಿ ಮಾಡಿಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಸದಸ್ಯರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಸಭೆಯಲ್ಲಿ ‘ ಬಸವೇಶ್ವರ ರಸ್ತೆಯ ಅಶೋಕ ಎಂಬವರಿಗೆ ಸೇರಿದ ಮನೆ ನಿವೇಶನವನ್ನು 5.5 ಸೆಂಟ್ಸ್‌ನಿಂದ 8.5 ಸೆಂಟ್ಸ್‌ಗೆ ಕಂದಾಯ ಅಧಿಕಾರಿ ತಿದ್ದುಪಡಿ ಮಾಡಿರುವ’ ಬಗ್ಗೆ ಕೇಳಿದರು. ನಿವೇಶನದ ಮಾಲೀಕರಿಗೆ ನೋಟಿಸ್ ನೀಡಿದ್ದು, ಅವರು ಸೂಕ್ತ ದಾಖಲಾತಿಯನ್ನು  ಪಂಚಾಯಿತಿಗೆ ನೀಡಿದ್ದಾರೆ. ಹಿಂದಿನ ಪಂಚಾಯಿತಿ ಮುಖ್ಯಾಧಿಕಾರಿ  ಪೂರ್ಣ ಮಾಹಿತಿ ನೀಡಿದ್ದರು. ದಾಖಲಾತಿಯನ್ನು ಸರಿಪಡಿಸಲಾಗಿದೆ’ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ತಿಳಿಸಿದರು.

ಕೇವಲ ದಾಖಲಾತಿ ಸರಿಪಡಿಸಿದರೆ, ಸಾಲದು, ತಪ್ಪಿತಸ್ಥ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಕಿರಣ್ ಒತ್ತಾಯಿಸಿದರು. ಈಗಾಗಲೇ ದಾಖಲಾತಿ ಸರಿಪಡಿಸಿದ್ದು, ಮುಂದೆ ನೀವೆ ಅದರ ವಿರುದ್ಧ ಹೋರಾಡಬೇಕಿದೆ ಎಂದು ಸದಸ್ಯರಿಗೆ ಮುಖ್ಯಾಧಿಕಾರಿ ತಿಳಿಸಿದರು.

ಜನವಸತಿ ಪ್ರದೇಶಗಳಲ್ಲಿ ಉದ್ದಿಮೆಗಳಿಗೆ ಪರವಾನಗಿ ನೀಡುತ್ತಿರುವ ಬಗ್ಗೆ ಸದಸ್ಯೆ ಶೀಲಾ ಡಿಸೋಜ ಆಕ್ಷೇಪ ವ್ಯಕ್ತಪಡಿಸಿದರು.  ರಾಜಕಾಲುವೆಗಳು ಒತ್ತುವರಿಯಾಗಿದೆ. ಪಟ್ಟಣ ಪಂಚಾಯಿತಿ ಕೂಡಲೇ ಹದ್ದುಬಸ್ತು ಸರ್ವೆ ಮಾಡಿಸಿ, ಒತ್ತುವರಿ  ತೆರವುಗೊಳಿಸುವಂತೆ ಸದಸ್ಯರಾದ ಜೀವನ್ ಮನವಿ ಮಾಡಿದರು.

ಪಂಚಾಯಿತಿ ಸಂತೆ ಮಾರುಕಟ್ಟೆಯ ಬಳಿ ಕನ್ನಡ ವೃತ್ತ ಇದೆ. ಆದರೆ, ಇದಕ್ಕೆ ಸುಣ್ಣ ಬಣ್ಣ ಬಳಿಯುತ್ತಿಲ್ಲ. ಸಂತೆ ಸಂದರ್ಭ ವೃತ್ತಕ್ಕೆ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡುವವರು, ಹಗ್ಗಕಟ್ಟಿ ಟೆಂಟ್ ನಿರ್ಮಿಸುವುದು, ಉಳಿಕೆ ಸಾಮಗ್ರಿಗಳನ್ನು ಅಲ್ಲಿ ಇರಿಸಿ,  ವೃತ್ತಕ್ಕೆ ಅಪಮಾನ ಮಾಡುತ್ತಿದ್ದಾರೆ.  ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಎಚ್.ಎ. ನಾಗರಾಜು ತಿಳಿಸಿದರು.  ಪಟ್ಟಣದ ಎಲ್ಲ ಪ್ರತಿಮೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದು,  ವೃತ್ತಕ್ಕೂ ಬಣ್ಣ ಹಚ್ಚಲಾಗುವುದು. ವೃತ್ತವನ್ನು ದುರ್ಬಳಕೆ ಮಾಡಿಕೊಳ್ಳುವವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

‘ಕಾಮಗಾರಿ ಅಧ್ವಾನ

ADVERTISEMENT

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ್ –2 ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಾಮಗಾರಿ ವೇಳೆ ಸಾಕಷ್ಟು ಸಮಸ್ಯೆಗಳಾಗಿವೆ. ಆದರೆ ಯೋಜನೆಯ ಸರಿಯಾದ ಮಾಹಿತಿಯನ್ನು ಆಯಾ ವಾರ್ಡ್ ಸದಸ್ಯರಿಗೆ ನಿವಾಸಿಗಳಿಗೆ ಗುತ್ತಿಗೆದಾರರ ಸಿಬ್ಬಂದಿ ಮಾಹಿತಿ ಮಾಡುತ್ತಿಲ್ಲ. ಎರಡು ತಿಂಗಳ ಹಿಂದೆ ಎಇಇ ಪ್ರಸನ್ನಕುಮಾರ್ ಅವರನ್ನು ಸಭೆಗೆ ಕರೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ರಸ್ತೆಯಲ್ಲಿ ಪೈಪ್ ಅಳವಡಿಸಲು ತೋಡಿರುವ ಗುಂಡಿಯನ್ನು ಇಲ್ಲಿಯವರೆಗೂ ಸರಿಯಾಗಿ ಮುಚ್ಚದಿರುವುದರಿಂದ ಅನೇಕ ವಾಹನ ಸವಾರರು ಬೀಳುತ್ತಿದ್ದಾರೆ. ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿ  ಪೂರ್ಣಗೊಂಡಿಲ್ಲ.   ಮಳೆಗಾಲ ಪ್ರಾರಂಭಗೊಳ್ಳಲಿದ್ದು  ಕೂಡಲೇ ಉಳಿದ ಕಾಮಗಾರಿಯನ್ನು ಮುಗಿಸಬೇಕು ಎಂದು ಸದಸ್ಯರದ ಶೀಲಾ ಡಿಸೋಜ ಮೃತ್ಯುಂಜಯ ಸಂಜೀವ ಆಗ್ರಹಿಸಿದರು. ಎಇಇ ಪ್ರಸನ್ನಕುಮಾರ್ ಮಾತನಾಡಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ.  ಉಳಿಕೆ ಕಾಮಗಾರಿಯನ್ನು ಶೀಘ್ರ ಮುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.