ಸೋಮವಾರಪೇಟೆ ತಾಲ್ಲೂಕಿನ ತಲ್ತಾರೆಶೆಟ್ಟಳ್ಳಿಯಲ್ಲಿ ಮರವೊಂದು ಮನೆಯ ಮೇಲೆ ಉರುಳಿರುವುದು
ಸೋಮವಾರಪೇಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಮಂಗಳವಾರವೂ ಸಹ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆಗಲಕ್ಕೆ ಯಾವುದೇ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ. ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗಿಲ್ಲ. ಭಾರಿ ಗಾಳಿಯಿಂದ ಹಲವಾರು ಮರಗಳು ನೆಲಕ್ಕುರುಳುತ್ತಿದ್ದು, ವಿದ್ಯುತ್ ಕಂಬಗಳು ಮುರಿದು ನಷ್ಟವಾಗಿದೆ.
ಶಾಂತಳ್ಳಿ ಹೋಬಳಿಯ ತಲ್ತಾರೆಶೆಟ್ಟಳ್ಳಿಯ ಬೋಪಯ್ಯ ಅವರ ಮನೆಯ ಮೇಲೆ ಮರ ಬಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರಿನ ಎಂ.ಪಿ.ಮೋರಿಸ್ ಎಂಬುವವರ ವಾಸದ ಮನೆಯ ಮೇಲೆ ಮರ ಬಿದ್ದಿದ್ದು, ಹಾನಿಯಾಗಿದೆ. ಜಂಬೂರು ಗ್ರಾಮದ ಜಾನಕಿ ಎಂಬುವವರ ಮನೆ ಗಾಳಿ ಮಳೆಗೆ ಹಾನಿಗೊಂಡಿದೆ. ಶನಿವಾರಸಂತೆಯ ಕೊರಲಳ್ಳಿಯ ಲಲಿತಾ ಎಂಬುವವರ ಮನೆ ಮೇಲೆ ಮರ ಉರುಳಿದ್ದು ಹಾನಿಯಾಗಿದೆ. ನಂದಿಗುಂದದ ಪ್ರಕಾಶ್ ಎಂಬುವವರ ವಾಸದ ಮನೆ ಗಾಳಿ ಮಳೆಗೆ ಜಖಂಗೊಂಡಿದ್ದು, ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ತೆರಳಿ ಮಹಜರು ನಡೆಸಿ ವರದಿ ನೀಡಿದ್ದಾರೆ.
ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯ ಪಕ್ಕ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಸೋಮವಾರಪೇಟೆಯಿಂದ ಕೊಡ್ಲಿಪೇಟೆಗೆ ತೆರಳುವ ಅವರದಾಳು ಗ್ರಾಮದಲ್ಲಿ ಬೃಹತ್ ಮರವೊಂದು ಉರುಳಿದ್ದು, ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಎಲ್ಲೆಡೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳಿ, ಮರ ತೆರವುಗೊಳಿಸಿದರು.
ಕುಡಿಯುವ ನೀರಿನ ಸಮಸ್ಯೆ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಭಾರಿ ಮಳೆಯಾಗುತ್ತಿದ್ದರೂ, ಕುಡಿಯುವ ನೀರಿನ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ ಶಾಂತಳ್ಳಿಯಲ್ಲಿ 154 ಮಿಲೀ ಮೀಟರ್, ಸೋಮವಾರಪೇಟೆ 116, ಶನಿವಾರಸಂತೆ 100 ಹಾಗೂ ಕೊಡ್ಲಿಪೇಟೆ 80.6 ಮಿಲೀ ಮೀಟರ್ ಮಳೆಯಾದ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.