ADVERTISEMENT

ಮಧ್ಯವರ್ತಿಗಳೊಂದಿಗೆ ಸಿಬ್ಬಂದಿ ಶಾಮೀಲು

ಕುಶಾಲನಗರ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:50 IST
Last Updated 26 ಜುಲೈ 2025, 5:50 IST
ಕುಶಾಲನಗರ ಪುರಸಭೆಯಲ್ಲಿ ಶುಕ್ರವಾರ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು 
ಕುಶಾಲನಗರ ಪುರಸಭೆಯಲ್ಲಿ ಶುಕ್ರವಾರ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು    

ಕುಶಾಲನಗರ: ಪುರಸಭೆ ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ಕಾವೇರಿದ ಚರ್ಚೆ ನಡೆಯಿತು.

ಸದಸ್ಯ ಆನಂದ್ ಕುಮಾರ್ ಮಾತನಾಡಿ, ಪುರಸಭೆಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರ ಕಡತಗಳ ಕುರಿತು ಸಿಬ್ಬಂದಿಯೇ ಮಧ್ಯವರ್ತಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.ಆಗ ಮಧ್ಯವರ್ತಿಗಳು ಅವರನ್ನು ಭೇಟಿ ಮಾಡಿ ಅರ್ಜಿಗೆ ಹಣ ನಿಗದಿ ಮಾಡಿ ಕೆಲಸ‌ ಮಾಡಿಸಿಕೊಡುವ ಕೆಲಸ ಆಗುತ್ತಿದೆ. ಈ ಕುರಿತು ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಮಧ್ಯವರ್ತಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಏಕೆ ಪಂಚಾಯಿತಿ ಕಚೇರಿಯಲ್ಲಿ ಇರುತ್ತಾರೆ. ಅವರು ಕುಶಾಲನಗರದ ಆಸ್ತಿಯನ್ನು ಗುತ್ತಿಗೆ ಪಡೆದುಕೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮಧ್ಯವರ್ತಿಗಳ ಕೆಲಸ ಕಾರ್ಯಗಳಿಗೆ ಹೆಚ್ಚಿನ ಕಾಳಜಿ, ಗೌರವ ತೋರುವ ಸಿಬ್ಬಂದಿ ಸದಸ್ಯರಿಗೆ ಮಾತ್ರ ಗೌರವ ನೀಡುತ್ತಿಲ್ಲ. ಇದರ ವಿರುದ್ಧ ಮಾತನಾಡುವ ಸದಸ್ಯರ ಕೊಲೆಗೆ ಸಂಚು ರೂಪಿಸುವ ಆತಂಕ ಕೂಡ ಇದೆ. ಮುಂದೆ ಏನಾದ್ರು ಅನಾಹುತ ನಡೆದರೆ ಅದಕ್ಕೆ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿ ನೇರ ಹೊಣೆ ಆಗಬೇಕಾಗುತ್ತದೆ. ಸಿಬ್ಬಂದಿ ವರ್ತನೆ ಹಾಗೂ ಭ್ರಷ್ಟಾಚಾರ ಖಂಡಿಸಿ ನಾನು ರಾಜೀನಾಮೆ ನೀಡಲು‌ ಸಿದ್ಧ’ ಎಂದು ಆನಂದ್ ಕುಮಾರ್ ಹೇಳಿದರು.

ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ಗಿರೀಶ್, ‘ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲಾ ಸಿಬ್ಬಂದಿ ಸಭೆ ಕರೆದು ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ನಮ್ಮ ಸೂಚನೆ ಉಲ್ಲಂಘಿಸಿ ಮಧ್ಯವರ್ತಿಗಳೊಂದಿಗೆ ಶಾಮೀಲಾಗುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಈ ಸ್ವತ್ತು ಖಾತೆ ಮಾಡಿಕೊಡಲು ಸಿಬ್ಬಂದಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯ ಪ್ರಕಾಶ್ ದೂರಿದರು.

ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ‘ಸಾರ್ವಜನಿಕರ‌‌ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ಅವರನ್ನು ಅಲೆದಾಡಿಸಬಾರದು’ ಎಂದು ಸಲಹೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಿರೀಶ್, ‘ಪ್ರಸ್ತುತ 41 ಫೈಲುಗಳು ಬಾಕಿ ಇವೆ. ಕಳೆದ ತಿಂಗಳು 70 ಹಾಗೂ ಮೇ ನಲ್ಲಿ 80 ಅರ್ಜಿಗಳನ್ನು ಪುಇರ್ಣಗೊಳಿಸಲಾಗಿದೆ’ ಎಂದರು.

ಆಡಳಿತ ಮಂಡಳಿ ಗಮನಕ್ಕೆ ಪುರಸಭಾ ವ್ಯಾಪ್ತಿಯ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ₹1.5ಕೋಟಿ ವೆಚ್ಚದ ಕಾಮಗಾರಿಗೆ ಅಧ್ಯಕ್ಷರು ಘಟನೋತ್ತರ ಮಂಜೂರಾತಿ ನೀಡಿದ್ದು, ಸದರಿ ಕಾಮಗಾರಿಗೆ ಅನುಮೋದನೆ ನೀಡುವ ವಿಚಾರಕ್ಕೆ ವಿಪಕ್ಷ‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಬಿ.ಜೈವರ್ಧನ್ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ಈ ವಿಚಾರ ಅಜೆಂಡಾದಲ್ಲಿ ಸೇರಿಸುವಂತೆ ಸಲಹೆ ನೀಡಿದ್ದರು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕು ಬಾಬು ಜಗಜೀವನ್‌ರಾಮ್ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಕೋರಿ ಬಂದಿರುವ ಪತ್ರದ ಬಗ್ಗೆ ಸದಸ್ಯ ಜೈವರ್ಧನ್ ಗಮನ ಸೆಳೆದರು. ಭವನಕ್ಕೆ ₹2 ಕೋಟಿ ಅನುದಾನ ನೀಡುತ್ತಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಶಿವಶಂಕರ್, ‘ಕಾಳಮ್ಮ ಕಾಲೊನಿ ಬಳಿ 30 ಸೆಂಟ್ ಜಾಗ ಇದೆ. ಇದು ಬಾಬು ಜಗಜೀವನ್ ರಾಮ್ ಯುವಕ ಸಂಘದ ಹೆಸರಿನಲ್ಲಿ ಇದೆ. ಈ ಜಾಗವನ್ನು ಭವನಕ್ಕೆ ಬಿಟ್ಟು ಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳು ಮುಂದಿನ ಕ್ರಮ‌ಕೈಗೊಳ್ಳಬೇಕು’ ಎಂದರು.

ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಜಾಗ ಒದಗಿಸಿಕೊಡುವಂತೆ ಸದಸ್ಯ ಪ್ರಕಾಶ್, ನವೀನ್ ಮನವಿ ಮಾಡಿದರು.ಈ ವಿಚಾರವನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕಂದಾಯ ಅಧಿಕಾರಿ ರಾಮು,ಆರೋಗ್ಯ ಅಧಿಕಾರಿ ಉದಯಕುಮಾರ್, ಸಿಬ್ಬಂದಿಗಳಾದ‌ ನಂಜುಂಡ, ಧನಂಜಯ ಇದ್ದರು.

ಪೌರಕಾರ್ಮಿಕರಿಗೆ ಉಪಾಹಾರದ ಜೊತೆ ಮೊಟ್ಟೆ

ಪೌರಕಾರ್ಮಿಕರಿಗೆ ಬೆಳಿಗ್ಗೆ ಸಮಯದಲ್ಲಿ ನೀಡುತ್ತಿರುವ ಉಪಾಹಾರ ಸಾಕಾಗುತ್ತಿಲ್ಲ. ಪ್ರತಿನಿತ್ಯ ಒಂದೇ ತರದ ತಿಂಡಿ ನೀಡಲಾಗುತ್ತಿದೆ ಎಂದು ಸದಸ್ಯರಾದ ಪ್ರಕಾಶ್ ಶಿವಶಂಕರ್ ನವೀನ್ ಹೆಚ್ಚಿನ ಹಣ‌ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್ ಸರ್ಕಾರ ₹35 ಉಪಾಹಾರಕ್ಕೆ ನಿಗದಿ ಮಾಡಿದೆ. ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದರು. ಸದಸ್ಯ ಪ್ರಮೋದ್ ಮಾತನಾಡಿ ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟಿನ್‌ಗೆ ವಹಿಸುವ ಸಲಹೆ ನೀಡಿದರು. ಮದ್ಯಪಾನ ಮಾಡಿ ಕಸದ ವಾಹನ ಚಾಲನೆ ಮಾಡಿದ ಆರೋಪ ಎದುರಿಸುತ್ತಿರುವ ಪೌರಕಾರ್ಮಿಕನ ವಿರುದ್ಧ ಕ್ರಮ‌ ಕೈಗೊಳ್ಳಬೇಕು. ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.