ಮಡಿಕೇರಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ.
ಈ ಕುರಿತು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ‘ಈ ದುರಂತಕ್ಕೆ ಸರ್ಕಾರವೇ ನೇರ ಕಾರಣ. ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ ಯಾವುದೇ ಯೋಜನೆಗಳೂ ವ್ಯವಸ್ಥಿತವಾಗಿ ಜಾರಿಯಾಗುತ್ತಿಲ್ಲ. ಮಾತ್ರವಲ್ಲ, ಕಾರ್ಯಕ್ರಮಗಳೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಕರಾವಳಿಯಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಒಂದು ರೀತಿಯಲ್ಲಿ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ’ ಎಂದು ಟೀಕಿಸಿದರು.
‘ಈಗ ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ನಾವು ಮೃತಪಟ್ಟವರ, ನೊಂದವರ ಪರ ಮಾತನಾಡುತ್ತೇವೆ. ಇದು ತಪ್ಪೇ?. ಇಷ್ಟೊಂದು ಮಂದಿ ಕಾಲ್ತುಳಿತದಲ್ಲಿ ಮೃತಪಟ್ಟರು. ಸರಣಿ ಕೊಲೆಗಳೂ ನಡೆದವು. ಈ ಎಲ್ಲ ಸಾವುಗಳು ಕಂಡ ಸರ್ಕಾರಕ್ಕೆ ಏನು ಅನ್ನಿಸುತ್ತಿಲ್ಲವೇ?’ ಎಂದೂ ಪ್ರಶ್ನಿಸಿದರು.
ಕರಾವಳಿಯಲ್ಲಿ ಈಗ ಕೆಲವರನ್ನು ಸರ್ಕಾರ ಗಡಿಪಾರು ಮಾಡಿದೆ. ಆದರೆ, ಹಿಂದೆ ಅಲ್ಲಿ ಕೊಲೆಗಳಾಗಿತ್ತು. ಆಗ ಏಕೆ ಈ ಕ್ರಮ ಕೈಗೊಳ್ಳಲಿಲ್ಲ? ಇದು ಒಂದು ಕೋಮಿನವರನ್ನು ಓಲೈಸುವ ಕ್ರಮವಾಗಿದೆ. ಎಲ್ಲರ ಜೀವಗಳೂ ಮುಖ್ಯ. ಯಾರ ಕೊಲೆಗಳೂ ಆಗಬಾರದು ಎಂಬುದು ಬಿಜೆಪಿ ಅಭಿಪ್ರಾಯ ಎಂದರು.
ಬಿಜೆಪಿಯ ಜಿಲ್ಲಾ ಘಟಕದ ಪ‍್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ‘ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ಮಧ್ಯೆ ನಡೆದ ‘ಕ್ರೆಡಿಟ್ ವಾರ್’ನಿಂದ ಈ ದುರಂತ ಸಂಭವಿಸಿದೆ’ ಎಂದು ಆರೋಪಿಸಿದರು.
ನಟ ಅಲ್ಲೂ ಅರ್ಜುನ್ ಭಾಗವಹಿಸಿದ್ದ ಕಾರ್ಯಕ್ರಮದ ವೇಳೆಯೂ ಕಾಲ್ತುಳಿತ ಉಂಟಾಗಿತ್ತು. ಆಗ ಅಲ್ಲಿನ ಕಾಂಗ್ರೆಸ್ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು ಎಂಬುದು ಎಲ್ಲರಿಗೂ ತಿಳಿದೇ ಇದೆ. ಈಗ ಈ ಕಾಲ್ತುಳಿತ ಪ್ರಕರಣ ಉಂಟಾಗಿರುವುದಕ್ಕೆ ಪೊಲೀಸರ ವರದಿ ದಿಕ್ಕರಿಸಿ ಕಾರ್ಯಕ್ರಮ ಆಯೋಜಿಸಿದ್ದು ಕಾರಣವಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರು ಧ್ವನಿಯಲ್ಲಿ ಮಾತನಾಡಿ ಪತ್ರಕರ್ತರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ತಳೂರು ಕಿಶೋರ್‌ಕುಮಾರ್, ಅರುಣ್‌ಕುಮಾರ್, ಉಮೇಶ್ ಸುಬ್ರಮಣಿ ಭಾಗವಹಿಸಿದ್ದರು.
ಸಮರ್ಥರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಿ; ಸುನಿಲ್ ಸುಬ್ರಮಣಿ
ವಿಧಾನಪರಿಷತ್ತಿನ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ‘ರಾಜ್ಯದಲ್ಲಿ ದುರ್ಬಲ ಮುಖ್ಯಮಂತ್ರಿ ಇದ್ದಾರೆ. ಇವರನ್ನು ತೆಗೆದು ಸಮರ್ಥರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಕಾಂಗ್ರೆಸ್ ಮಾಡಬೇಕು’ ಎಂದು ಒತ್ತಾಯಿಸಿದರು. ಕೇರಳದಲ್ಲಿ ಆನೆ ತುಳಿದು ಮೃತಪಟ್ಟವರಿಗೆ ₹ 25 ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಇಲ್ಲಿ ನಮ್ಮ ರಾಜ್ಯದ ಅಭಿಮಾನಿಗಳು ಮೃತಪಟ್ಟರೆ ಅವರಿಗೆ ₹ 10 ಲಕ್ಷ ಮಾತ್ರ ಪರಿಹಾರ ನೀಡುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.