ADVERTISEMENT

ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ​

ಮಗಳ ಸಾವಿಗೆ ಕಾರಣನಾದ ಯುವಕನ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:33 IST
Last Updated 12 ಫೆಬ್ರುವರಿ 2020, 14:33 IST

ಶನಿವಾರಸಂತೆ: ಇಲ್ಲಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ವಿದ್ಯಾರ್ಥಿನಿಯು 2019ರ ಡಿ.22ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಂದು ಕಾಲೇಜಿನಲ್ಲಿ ನೃತ್ಯ ಅಭ್ಯಾಸ ಮುಗಿಸಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆ ಪ್ರೀತಮ್ ಎಂಬ ಯುವಕನೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದು, ಯಾವುದೋ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ್ದ ದೂರಿಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು.

ಆದರೆ, ಈಗ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಫೆ.10ರಂದು ಮನೆಯನ್ನು ಸ್ವಚ್ಛಗೊಳಿಸುವಾಗ ಬೀರಿನಲ್ಲಿ ವಿದ್ಯಾರ್ಥಿನಿ ಇಂಗ್ಲಿಷ್‌ನಲ್ಲಿ ಬರೆದಿಟ್ಟಿದ್ದ ಡೆತ್‌ನೋಟ್ ಆಕೆಯ ಪೋಷಕರಿಗೆ ಸಿಕ್ಕಿದೆ.

ADVERTISEMENT

‘ಪ್ರೀತಮ್ ಎಂಬಾತ ಮೋಸ ಮಾಡಿದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ತನ್ನ ಸಾವಿಗೆ ಆತನೇ ಕಾರಣ’ ಎಂದು ಆಕೆ ಪತ್ರದಲ್ಲಿ ಬರೆದಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮಗಳ ಸಾವಿಗೆ ಕಾರಣನಾದ ಪ್ರೀತಮ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆತನನ್ನು ಬಂಧಿಸಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.