ADVERTISEMENT

ರಾಷ್ಟ್ರೀಯ ಪ್ರಶಸ್ತಿ: ನಗರದಲ್ಲಿ ವಿಜಯೋತ್ಸವ

ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಕ್ರೀಡಾ ಸಡಗರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 13:25 IST
Last Updated 22 ನವೆಂಬರ್ 2019, 13:25 IST
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ತಂಡವು ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ನಗರದಲ್ಲಿ ಶುಕ್ರವಾರ ವಿಜಯೋತ್ಸವದ ಮೆರವಣಿಗೆ ನಡೆಯಿತು
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ತಂಡವು ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ನಗರದಲ್ಲಿ ಶುಕ್ರವಾರ ವಿಜಯೋತ್ಸವದ ಮೆರವಣಿಗೆ ನಡೆಯಿತು   

ಮಡಿಕೇರಿ: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ತಂಡವು ರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಚಾಂಪಿಯನ್ ಆಗಿದ್ದು, ನಗರದಲ್ಲಿ ಶುಕ್ರವಾರ ವಿಜಯೋತ್ಸವ ನಡೆಸಲಾಯಿತು. ವಿಜೇತ ತಂಡದ ಆಟಗಾರರು ಮೆರವಣಿಗೆಯಲ್ಲಿ ಸಾಗಿ ಬಂದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ತಂಡವು ವಾರಣಾಸಿಯಲ್ಲಿ ನಡೆದ 17 ವರ್ಷ ವಯೋಮಿತಿ ಒಳಗಿನ ಬಾಲಕರ ವಿಭಾಗದಲ್ಲಿ 25ನೇ ಸಿಬಿಎಸ್‌ಸಿ ರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ಚಿನ್ನದ ಟ್ರೋಫಿ ಮತ್ತು ಬಾಲಕಿಯರ ತಂಡವು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಟ್ರೋಫಿ ಪಡೆದುಕೊಂಡಿತ್ತು.

ಇದೇ ಪ್ರಥಮ ಬಾರಿಗೆ ದಕ್ಷಿಣ ಭಾರತದ ಸಿಬಿಎಸ್‌ಸಿ ಶಾಲೆಯೊಂದು ಬಾಲಕರ ವಿಭಾಗದಲ್ಲಿ ಚಿನ್ನದ ಟ್ರೋಫಿ ಪ್ರಥಮ ಬಹುಮಾನ ಪಡೆದಿದ್ದು 2ನೇ ಬಾರಿಗೆ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದ್ದು ದಾಖಲೆ ಆಗಿದೆ.

ADVERTISEMENT

ಮಡಿಕೇರಿಯ ಮುಖ್ಯರಸ್ತೆಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ಆಟಗಾರರು, ಶಾಲಾ ವಾದ್ಯ ತಂಡದೊಂದಿಗೆ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಬಾಲಕರ ವಿಭಾಗದಲ್ಲಿ ತಂಡದ ನಾಯಕ ಸಿ.ಪಿ.ಲಿವಿನ್ ಉತ್ತಮ ಫುಲ್ ಬ್ಯಾಕ್ ಆಟಗಾರ ಹಾಗೂ ಬಾಲಕಿಯರ ವಿಭಾಗದಲ್ಲಿ ತಂಡದ ನಾಯಕಿ ತೇಜಸ್ವಿ ದೇವಯ್ಯ ಉತ್ತಮ ಹಾಫ್ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ.ಉತ್ತಪ್ಪ ವಿಜೇತ ವಿದ್ಯಾರ್ಥಿ ತಂಡವನ್ನು ಅಭಿನಂದಿಸಿದರು. ಕೊಡಗಿಗೇ ಈ ಯುವ ಹಾಕಿ ತಂಡವು ಕೀರ್ತಿ ತಂದಿದ್ದು ಶ್ಲಾಘನೀಯ ಎಂದೂ ಉತ್ತಪ್ಪ ಶ್ಲಾಘಿಸಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ‘ಹಾಕಿ ಕ್ರೀಡೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡೆಯತ್ತ ಆಸಕ್ತಿ ತಳೆದಿರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಹಾಕಿ ತಂಡ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಹಲವಾರು ಹೆಸರಾಂತ ಶಾಲಾ ಹಾಕಿ ತಂಡಗಳ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ್ದಾರೆ. ಮುಂದೆಯೂ ಈ ತಂಡಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ಶಾಲಾ ವತಿಯಿಂದ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ, ಭಾರತೀಯ ವಿದ್ಯಾಭವನ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಶಾಲೆಯ ಮುಖ್ಯ ಆಡಳಿತಾಧಿಕಾರಿ ವಿದ್ಯಾ ಹರೀಶ್, ಉಪ ಪ್ರಾಂಶುಪಾಲೆ ವನಿತಾ, ವ್ಯವಸ್ಥಾಪಕ ರವಿ, ಟ್ರಾವಲ್ ಕೂರ್ಗ್‌ ಮಾಲೀಕ ಚೆಯ್ಯಂಡ ಸತ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.